Tuesday, December 21, 2010

ಪರಿಸರ ಸಂರಕ್ಷಣೆ

ಕೆಲ ದಿನಗಳ ಹಿಂದೆ ನಮ್ಮ ಖಾಸಗಿ ಕಂಪನಿಯಲ್ಲಿ ಮನೋಜ್ಞವಾದ ತರಬೇತಿಯ ಕಾರ್ಯಕ್ರಮವನ್ನು ಏರ್ಪಡಿಸಿದ್ದರು, ಅದರ ಹೆಸರು "ವಿಶ್ಲೇಷಿಸುವಿಕೆ ಹಾಗು ನಿರ್ಣಯ ತೆಗೆದುಕೊಳ್ಳುವಿಕೆ" (Analysing & Decision Making) ಈ ಸದವಕಾಶವನ್ನು ಉಪಯೊಗಿಸಿಕೊಂಡೆ. ತರಬೇತುದಾರರು ನಮ್ಮೆಲ್ಲರ ಸಾಮರಸ್ಯ ಬೆಳೆಸಲು ನಗೆಪಾಟಲಿಗೆ ಈಡು ಮಾಡಿ ತರಬೇತಿಯಲ್ಲಿ ತಲ್ಲೀನರಾಗಲು ಎಲ್ಲರ ಲವಲವಿಕೆಯನ್ನು ಉತ್ತೇಜಿಸಿದರು. ತರಬೇತಿ ಸಾಗುತ್ತಿದ್ದಂತೆ ನಮ್ಮೆಲ್ಲರಿಗು ಒಂದು ಮುಖ್ಯವಾದ ಪ್ರಶ್ನೆಯೊಂದನ್ನು ಕೇಳಿದರು. ಆ ಪ್ರಶ್ನೆಗೆ ಎಲ್ಲರು ಉತ್ತರಿಸಬೇಕು, ಮತ್ತು ನೇರವಾಗಿರಬೇಕು.

ಸುಮಾರು ಇಪ್ಪತ್ತು ಮಂದಿ ನೆರೆದಿದ್ದೆವು. ನಾವು ಕುತೂಹಲದಿಂದ ಅವರ ಪ್ರಶ್ನೆಗೆ ಕಿವಿಗೊಡುತ್ತಿದ್ದೆವು. ಸುಲಭವಾದ ಪ್ರಶ್ನೆ, ಪ್ರಶ್ನೆ ಹೀಗಿತ್ತು "ನಿಮಗೆಲ್ಲರಿಗು ಒಂದೊಂದು ಗಿಡದ ಬಿತ್ತನೆ ಕಾಳು ಕೊಟ್ಟರೆ ಪ್ರತಿಯೊಬ್ಬರು ಏನು ಮಾಡುತ್ತೀರಿ?" ಎಂದು ಕೇಳಿದರು. ಅಲ್ಲಿ ನೆರೆದಿರುವಂತಹ ನನ್ನ ಕಚೇರಿಯ ಸ್ನೇಹಿತರು ವಿಭಿನ್ನವಾದ ಉತ್ತರವನ್ನು ಕೊಡುತ್ತಿದ್ದರು. ಒಬ್ಬೊಬ್ಬರು "ನಾನು ಗಿಡವನ್ನು ಮರವಾಗಿ ಬೆಳೆಸಿ ಅದರ ಹಣ್ಣುಗಳನ್ನು ಉಪಯೋಗಿಸುತ್ತೇನೆ" ಮತ್ತೊಬ್ಬರು "ನಾನು ಗಿಡವನ್ನು ಬೆಳೆಸಿ ಅದರ ಹೂವುಗಳನ್ನು ದೇವರಿಗೆ ಅರ್ಪಿಸುತ್ತೇನೆ" ಎಂದು ಉತ್ತರವನ್ನು ನೀಡುತ್ತಿದ್ದರು. ನನ್ನ ಸರದಿ ಬರುವಾಗ ತರಬೇತುದಾರರು ಸ್ನೇಹಿತರು ನೀಡಿದ ಉತ್ತರಕ್ಕೆ ಕಿರುನಗೆಯನ್ನು ಬೀರುತ್ತಿದ್ದರು. ನಾನು ಕೂಡ ಸಾಮಾನ್ಯವಾದಂತಹ ಉತ್ತರವನ್ನು ಕೊಟ್ಟೆ "ನಾನು ಗಿಡವನ್ನು ಮರವಾಗಿ ಬೆಳೆಸಿ ಅದರ ನೆರಳು ಸಾರ್ವಜನಿಕರಿಗೆ ಉಪಯೋಗವಾಗಲಿ" ಎಂದು ಉತ್ತರಿಸಿದೆ. ಅದಕ್ಕೂ ನಗೆಯನ್ನು ಬೀರಿದರು. ಎಲ್ಲರು ತರಬೇತುದಾರರ ಉತ್ತರಕ್ಕಾಗಿ ಹಾತೊರೆಯುತ್ತಿದ್ದರು. ಅವರು ಏನೆಂದು ಉತ್ತರಿಸಿಯಾರು ಎಂದು ಊಹಿಸತೊಡಗಿದೆವು.

ಅವರ ಉತ್ತರ ಹೀಗಿತ್ತು "ಎಲ್ಲರು ತಮ್ಮ ಕೊಂಚ ಸ್ವಾರ್ಥಕ್ಕಾಗಿ ಗಿಡವನ್ನು ಮರವಾಗಿ ಬೆಳೆಸಿ ತಮ್ಮ ತಮ್ಮ ಉಪಯೋಗಕ್ಕನುಸಾರವಾಗಿ ಯೋಚಿಸಿದ್ದೀರಿ, ಆದರೆ ಆ ಬಿತ್ತನೆಯಿಂದ ಗಿಡವನ್ನು ಮರಗಳನ್ನಾಗಿ ಬೆಳೆಸಿ, ದಟ್ಟಕಾಡನ್ನಾಗಿ ಪರಿವರ್ತಿಸಿದರೆ ಪರಿಸರ ಸಂರಕ್ಷಣೆಯಾಗುವುದಲ್ಲವೇ? ಅದರಲ್ಲಿ ಹುಟ್ಟುವ ಬೀಜಗಳನ್ನು ಮರು ಬಿತ್ತನೆ ಮಾಡಿ ಪುನಃ ಮರವಾಗಿ ಹುಟ್ಟಿಸಿ ಇನ್ನಷ್ಟು ಪರಿಸರವನ್ನು ಸಂರಕ್ಷಿಸಿ ಜೀವರಾಶಿಗಳಿಗೆ ಉಪಯೋಗವಾಗುತ್ತಲ್ಲವೇ?" ಎಂದು ಹೇಳಿದಾಗ ನಮ್ಮೆಲ್ಲರಿಗು ನಾಚಿಕೆಯಾಯಿತು. ಹೌದಲ್ಲವೆ, ನಮ್ಮ ಸ್ವಾರ್ಥಕ್ಕಾಗಿ ನಮ್ಮ ಉಪಯೋಗಕ್ಕನುಸಾರವಾಗಿ ಇಡೀ ಪರಿಸರವನ್ನೇ ಹಾಳು ಮಾಡಲು ಹೊರಟಿರುವಂತಹ ಪ್ರಸಂಗ ನಮ್ಮ ಮುಂದೆ ನಡೆಯುತ್ತಿದೆ. ಉತ್ತರ ಬ್ರಿಟಿಷ್ ದೇಶಗಳಲ್ಲ್ಲಿಇಂತಹ ಕಾರ್ಯಗಳಲ್ಲಿ ತೊಡಗಿಕೊಂಡು ಪರಿಸರಕ್ಕೆ ಆದ್ಯತೆ ಕೊಟ್ಟು ತಮ್ಮ ವಿಶಾಲವಾದ ಮನೋಭಾವವನ್ನು ಮೆರೆಯುತ್ತಿದ್ದಾರೆ. ನಾವು ಕೂಡ ಇಂತಹ ವಿಶಾಲವಾದ ಮನೋಭಾವವನ್ನು ಸರ್ವಾನುಮತದಿಂದ ಬೆಳೆಸಿಕೊಂಡು ಪರಿಸರವನ್ನು ಉಳಿಸುಕೊಳ್ಳುಲು ಪ್ರಯತ್ನಪಟ್ಟರೆ ಸಕಲ ಜೀವರಾಶಿಗಳಿಗು ಒಳಿತಾಗುವುದರಲ್ಲಿ ಸಂಶಯವಿಲ್ಲ ಎಂಬುದು ನನ್ನ ನಂಬಿಕೆ.