Thursday, April 19, 2018

ಆತ್ಮಗತ



ಹುಟ್ಟೂರು - "ಮತ್ತಿಕಾಡು"

ದೊಡ್ಡ ಕಾನನದ ಹೊದಿಕೆಯ ಹೊದ್ದು, ಸಣ್ಣ ತುಣುಕಿನ ಭಾಗವಾದ ಪಶ್ಚಿಮ ಘಟ್ಟವನ್ನು ಮೋಡವು ತಬ್ಬಿದ್ದನ್ನು ಕಣ್ತುಂಬಿಕೊಳ್ಳುತ್ತ, ವಿಸ್ಮಯ ಬಾನಾಡಿಯಲ್ಲಿ ಕೇಸರಿ ಬಣ್ಣವನ್ನು ಸವಿಯುತ್ತಾ, ಪ್ರಕೃತಿಯ ಅನವರತ ಸೋಜಿಗಗಳಿಗೆ ಬೆರಗಾಗಿ, ಉಸಿರು, ನಿಟ್ಟುಸಿರು, ಉತ್ಸಾಹ, ಮನೋಲ್ಲಾಸ, ರೋಮಾಂಚನ ಮುಂತಾದ ವಿಭಿನ್ನ ಭಾವನಾತ್ಮಕವಾದ, ಮನಸೂರೆಗೊಳ್ಳುವ ಕಿರಿದಾದ ಮುಖ್ಯರಸ್ತೆ ಇಕ್ಕೆಲಗಳಲ್ಲಿ ಸಣ್ಣಪುಟ್ಟ ಕಿರಾಣಿ ಅಂಗಡಿಗಳ ಸಮೂಹವ, ಮಂಗಳೂರಿನ ಹೆಂಚನ್ನು ಹೊದ್ದಿರುವ ಪುಟ್ಟ ಮನೆಗಳು ಕೈ ಬೀಸಿ ಕರೆದುಕೊಳ್ಳುವ ನನ್ನ ಹುಟ್ಟೂರು "ಮತ್ತಿಕಾಡು" ದಕ್ಷಿಣ ಕಾಶಿ ಕೊಡಗಿನ ಸುಂಟಿಕೊಪ್ಪದಲ್ಲಿರುವ ಪುಟ್ಟ ಊರು.

ತಳವೂರಿರುವುದು ಬೆಂಗಳೂರಿನಲ್ಲಿ ಸೆಳೆತವಿರುವುದು ಕೊಡಗಿನ ರಮಣೀಯ ಹುಟ್ಟೂರಿನಲ್ಲಿ. ವೀರಾಜಪೇಟೆಯಿಂದ ಚೆಟ್ಟಳ್ಳಿ ದಾರಿಯನ್ನು ಅನುಸರಿಸಿದರೆ ಅತ್ತೂರು-ನಲ್ಲೂರು, ಭೂತನಕಾಡು ದಾಟಿ ಬಲಕ್ಕೆ ಹೊರಳಿ ಮಣ್ಣಿನ ರಸ್ತೆಯಲ್ಲಿ ಒಂದು ಫರ್ಲಾಂಗಿನಷ್ಟು ಕ್ರಮಿಸಿದರೆ ಪೂರ್ವಾಭಿಮುಖವಾಗಿ ಸಿಗುವ ಮಾರಮ್ಮನ ಗುಡಿಯ ಬದಿಯಲ್ಲಿ ನನ್ನ ತಾಯಿಯ ಮನೆ ಆ ಮನೆಯಲ್ಲಿಯೆ ನನ್ನ ಜನನ.

ಕುಶಾಲನಗರದಿಂದ ಕ್ರಮಿಸಿ ಸುಂಟಿಕೊಪ್ಪ ಊರನ್ನು ದಾಟಿ ಗದ್ದೆಹಳ್ಳ ಅನುಸರಿಸಿ ಬಂದರು "ಮತ್ತಿಕಾಡು" ತಲುಪಲುಬಹುದು.

ಕಿರಿದಾದ ಮಣ್ಣಿನ ರಸ್ತೆಯಲ್ಲಿ ನಡೆಯುತ್ತಿರುವಾಗ ಕಾಫಿ ತೋಟದ ಘಮಲು, ಬಿಬ್ಬಿರಿಯ ನಿನಾದ, ದುಂಬಿಗಳ ಝೇಂಕಾರ ಗುಡಿಯ ನಾಲ್ಕು ದಿಕ್ಕುಗಳಲ್ಲಿ ಹೊಮ್ಮುತ್ತಿತ್ತು, ಇವೆಲ್ಲವೂ ಆಹ್ವಾನಿಸುತ್ತಿತ್ತು. ಗುಡಿಯ ಮುಂಭಾಗದಲ್ಲಿ ದೊಡ್ಡ ಆಲದ ಮರ ಅದರ ನೆರಳಲ್ಲಿ ಕೂತಾಗ ಆಗುವ ಹಿತವಾದ ಅನುಭವ ಅವರ್ಣನೀಯ. ಆಲದ ಮರದ ಎಡಭಾಗಕ್ಕೆ ವಿಸ್ತಾರವಾದ ಹುಲ್ಲಿನ ಅಂಗಳ ಅದಕ್ಕೆ ಆನಿಸಿಕೊಂಡಿರುವ ಕಿರಿದಾದ ರಸ್ತೆ ಕೊಡಗರಹಳ್ಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅದರ ಛಾಯಾಚಿತ್ರವನ್ನು ತೆಗೆದು ದಿಟ್ಟಿಸಿದಾಗ ಬ್ರಹ್ಮನಲ್ಲಿ ಲೀನವಾಗುವಂತೆ ಭಾಸವಾಗುತ್ತಿತ್ತು. ಬಾಲ್ಯ ಅಷ್ಟಾಗಿ ಕಳೆದಿಲ್ಲವಾದರು ಸೆಳೆತವು ಅದಮ್ಯ ಹಾಗು ನೆನಪುಗಳು ಅಮರ. ಮೂರು ವರ್ಷಗಳ ಹಿಂದೆ ಹುಟ್ಟೂರಿಗೆ ಭೇಟಿಕೊಟ್ಟು ತೆರಳಿದಾಗ ಮನಸ್ಸೆಲ್ಲ ಖಾಲಿ, ಒಳಗೆ ನೀರವ ಮೌನ.

ಕಾಡಿನ ಸೆರಗು ನೆನಪಾದಾಗ ಮತ್ತೆ ಆ ಹುಡುಗಾಟದ ಬಾಲ್ಯದ ಲೋಕಕ್ಕೆ ಹೋಗೋಣವೆಂದು ಹಪಹಪಿಸುತ್ತದೆ. ಮನದ ಭಾವಗಳ ಭೋರ್ಗರೆತ, ನೆನಪುಗಳ ವರ್ಷಧಾರೆ ಆಗಾಗ ಇದಿರಾಗುವ ನಿಸ್ಸಹಾಯಕ ಸ್ಥಿತಿ, ಗೊಂದಲ, ಹತಾಶೆ, ನಿರಾಸೆ, ತಾಪತ್ರಯಗಳಿಂದ ಬಿಡುಗಡೆಯನ್ನು ಹೊಂದಿ, ಶಾಂತತೆಯನ್ನು ಬಯಸಿದಾಗ ಕೂಡಲೇ ನನ್ನೂರಿನ ಕಡೆಗೆ ಮನಸ್ಸು ಹಾಯುತ್ತದೆ. ನೆನಪಿನ ಬತ್ತಿ ತಂತಾನೇ ಹತ್ತಿಕೊಳ್ಳುತ್ತದೆ. ಎಣಿಸಲಾರದಷ್ಟು ನೆನಪುಗಳು ಮನದ ಪರದೆಯಲ್ಲಿ ಪ್ರಕಟವಾಗುತ್ತದೆ.

ವಾಸ್ತವದಲ್ಲಿ ಜೀವನದ ದಾರಿ ಎಲ್ಲಿಗೆ ಕರೆದುಕೊಂಡು ಹೋಗುತ್ತದೆಯೊ ಅದನ್ನು ನಾ ಅರಿಯೆ ಅದೇ ಸೋಜಿಗದ ಸಂಗತಿ, ಮನಸ್ಸಿನ ಮೂಲೆಯಲ್ಲಿ ನನ್ನ ಹುಟ್ಟೂರಿನ ದಾರಿಯನ್ನು ಹಾಗು ಅದರ ಓಜಸ್ಸನ್ನು ಹಿಡಿಯುವ ಕಾತುರತೆ ಹಾಗು ಉತ್ಸಾಹದ ಚಿಲುಮೆ ಕೊನರುತ್ತದೆ, ಆದರೆ ಸದ್ಯಕ್ಕೆ ಆಸೆಯು ಕೈಗೂಡುವ ಸ್ಥಿತಿಯಲ್ಲಿಲ್ಲ.

ತಿಳಿದಿಲ್ಲ ಜೀವನದ ಇಳಿಸಂಜೆಯಲ್ಲಿ ಮನಸ್ಸಿಗೆ ಆಹ್ಲಾದವನ್ನೀಯುವ ಆ ಸ್ಥಳವು ನನ್ನನ್ನು ಆಲಂಗಿಸುತ್ತದೆಯೋ ಕಾದು ನೋಡಬೇಕಿದೆ. ಬ್ರಹ್ಮನೇ ಮೊದಲು ಬರೆದಿಟ್ಟ ಹಣೆಯಬರಹವನ್ನು ಅಳಿಸಿ, ಅವಲೋಕಿಸಿ "ನೀ ಅಲ್ಲಿಗೆ ಹೋಗಯ್ಯ" ಎಂದು ಅಲ್ಲಿಗೆ ದಬ್ಬಿದರೆ ಅದೊಂದು ಪವಾಡವೆ ಸರಿ. ನೆನಪುಗಳನ್ನು ಮಡಿಲಿನಲ್ಲಿ ತುಂಬಿಸಿಕೊಂಡು ಹೋಗಲು ಬಂದ ನನಗೆ ನಿರಾಸೆಯಾಗದೆ ಇರಲಿ, ಪವಾಡವೇ ನಡೆಯಲಿ ಎಂದು ಬ್ರಹ್ಮನಲ್ಲಿ ಹಲುಬುತ್ತೇನೆ. ಹುಟ್ಟೂರು ಮೂಕವಾಗದೆ ಇರಲಿ ಅದರ ರಮಣೀಯತೆಯನ್ನು ಕಾಯ್ದುಕೊಂಡಿರಲಿ ನಾ ಬರುವವರೆಗೆ.

Labels:

ಒಂದು ಮೀಸೆಯ ಕಥೆ


"ಮೀಸೆಯುಂ ಪುರುಷ ಲಕ್ಷಣಂ"

ಬಹುತೇಕ ಗಂಡಸರ ಆಸ್ತಿಯೇ ಈ ಮೀಸೆ. ಹದಿಹರೆಯ ಸಮಯದಲ್ಲಿ ಮೂಗು ಮತ್ತು ಬಾಯಿಯ ಮಧ್ಯೆ ಕುಡಿಯಂತೆ ಚಿಗುರಿ ಕ್ರಮೇಣ ದಟ್ಟವಾಗಿ ಬೆಳೆದು ರಾರಾಜಿಸುವ ಈ ಮೀಸೆ ಗಂಡಸರ ಪಾಲಿಗೆ ಹೆಮ್ಮೆಯ ಪ್ರತೀಕ. ಪ್ರೌಢಾವಸ್ಥೆಯ ದಿನಗಳಲ್ಲಿ ಮೀಸೆಯು ಚಿಗುರಿ ಕನ್ನಡಿ ಮುಂದೆ ನಿಂತು ಅವಿರತವಾಗಿ ದೃಷ್ಟಿಸಿದರು ಕಾಡಿದ ಪ್ರಶ್ನೆಗಳು ಹಲವಾರು, ವಯಸ್ಸು ಕಳೆದಂತೆಲ್ಲ ಉತ್ತರಗಳು ಸಿಗುತ್ತಿತ್ತು ಮೀಸೆಯು ದಟ್ಟವಾಗುತ್ತಿತ್ತು. ಕಾಲೇಜು ದಿನಗಳಲ್ಲಿ ಬೇರೆ ಹುಡುಗರತ್ತ ಹಾಗು ಸ್ನೇಹಿತರತ್ತ ಮೂಗಿನ ಕೆಳಗೆ ದೃಷ್ಟಿಸಿದಾಗ ಕೆಲವರಿಗೆ ಕುಡಿ ಮೀಸೆಯಿದ್ದರೆ ಇನ್ನು ಕೆಲವರಿಗೆ ಸಮೂಹವಾಗಿ ಕೂದಲುಗಳು ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ ಬೆಳೆಯುತ್ತಿದ್ದದ್ದು ನನ್ನ ಗಮನಕ್ಕೆ ಬಂದು ಈ ಮೀಸೆಯು ಕಿರಿ ಕಿರಿ ಎಂದು ಹಲವು ಬಾರಿ ಹಲುಬಿದ್ದೇನೆ. ಕೊನೆಗು ಅನಿಸಿದ್ದು ಮೀಸೆಯೆ ಸರಿ, ಮೀಸೆ ಬಿಟ್ಟರೆ ಸೈ ಎಂದು ತೀರ್ಮಾನಿಸಿ ಇನ್ನಷ್ಟು ದಟ್ಟವಾಗಿ ಬೆಳೆಯಲಿ ಎಂದು ಆಶಿಸಿದಾಗ ಒಂದು ದಿನ ಮೀಸೆಯನ್ನು ಬ್ಲೇಡ್ ತಾಗಿಸಿ ಬೋಳಿಸಿಯು ಆಯಿತು, ಆ ದಿನ ನನ್ನಲ್ಲಿ ಆದ ಅನುಭವ ಹೇಳತೀರದು, ಸ್ನಾನವನ್ನು ಮುಗಿಸಿ ಬರುವಾಗ ಎಲ್ಲರ ಚಿತ್ತ ನನ್ನ ಮೀಸೆಯಿಲ್ಲದ ಮುಖಾರವಿಂದದತ್ತ ನಾಟಿ ಕಿಸಕ್ಕನೆ ನಕ್ಕು ಗೇಲಿ ಮಾಡಿದ ಮನೆಯವರು ಹಾಗು ಗೆಳೆಯರು ಹಲವಾರು. ದಿನಗಳು ಉರುಳಿದಂತೆಲ್ಲ ದಪ್ಪವಾಗಿ ದಟ್ಟವಾಗಿ ಮೀಸೆಯು ಬೆಳೆದು ಅದರ ಮೇಲೆ ಒಲವು ಹೆಚ್ಚಿಸಿತು.

ನಮ್ಮ ಸೈನಿಕರು, ರಾಜರು, ಸೇನಾಧಿಕಾರಿಗಳು, ಪಾಳೇಗಾರರು, ಜಮೀನ್ದಾರರು ಮೀಸೆಯನ್ನು ಬಿಡುವ ರೀತಿಯನ್ನು ಗಮನಿಸುತ್ತ ಎಂಜಿನೀಯರಿಂಗ್ ದಿನಗಳಿಗೆ ದಾಪುಗಾಲನ್ನಿಟ್ಟೆ. ಓದಿನ ಕಡೆ ಕೇಂದ್ರಿತವಾಗುತ್ತಿದ್ದಂತೆ ಮೀಸೆಯ ಕಡೆ ಗಮನ ವಾಲಲಿಲ್ಲ. ಎರಡು ಮೂರು ದಿನಕ್ಕೊಮ್ಮೆ ಗಡ್ಡ ಬೋಳಿಸುತ್ತ ಮೀಸೆಯನ್ನು ನೀವುದನ್ನು ಬಿಟ್ಟರೆ ಹೆಚ್ಚಾಗಿ ಅದಕ್ಕೆ ಒತ್ತು ಕೊಡಲಿಲ್ಲ.

ಕೆಲಸಕ್ಕೂ ಸೇರಿ ವಿಶೇಷ ಹವ್ಯಾಸಗಳನ್ನು ಬೆಳೆಸಿಕೊಂಡೆ ಆಗಾಗ್ಗೆ ಕನ್ನಡಿಯ ಮುಂದೆ ನಿಂತು ಮೀಸೆಯ ಚೆಂದ ನೋಡುತ್ತಾ ಬಾಚುವುದು, ಮೀಸೆಯನ್ನು ಎಳೆದು ಅದರ ತುದಿಯನ್ನು ಕಚ್ಚುವುದು, ಮೀಸೆಯ ಮೇಲೆ ಕೈಯಾಡಿಸುತ್ತ ಟ್ರಿಮ್ ಮಾಡಿಕೊಳ್ಳಲಾರಂಭಿಸಿದೆ. ಲೆಫ್ಟಿನೆಂಟ್ ಗ್ರೇಡ್‌ ಕೊಟ್ಟಂತೆ ಮಿಲಿಟರಿಯವನ ಮೀಸೆಯೂ ಗ್ರೇಡಿಗೆ ತಕ್ಕಂತೆ ದಿನವೂ ರೂಪುಗೊಳ್ಳುತ್ತಿತ್ತು. ಮೀಸೆ ಮಿಲಿಟರಿ ಲಕ್ಷಣಂ ಎಂದಾದದ್ದು ಈ ಕಾಲದಿಂದಲೇ ಇರಬೇಕು.

ಸ್ತ್ರೀಮೂಲ, ನದಿಮೂಲ ಎಂಬಂತೆ ಮೀಸೆ ಮೂಲ ಏನು? ಮೀಸೆ ಮೂಲ ಎಲ್ಲಿಂದ ಎಂದು ಕೆದಕಿದಾಗ ಎಲ್ಲೊ ಓದಿದ ನೆನಪು ಅದನ್ನು ತಿಳಿದಾಗ "ಮುಸ್ತ್ಯಾಚ್" ಎಂಬುದು ಫ್ರೆಂಚ್ ಪದ. ಹುಟ್ಟು 16ನೇ ಶತಮಾನ, ಲ್ಯಾಟಿನ್‌ನಲ್ಲಿ ಮೊಸ್ಟ್ಯಾಷಿಯೋ, ಗ್ರೀಕರು ಮುಸ್ತಾಕಿಯೋನ್ ಎಂದು ಹೇಳುತ್ತಾರೆ.

ಮೀಸೆಗೆ ಚರಿತ್ರೆ ಇದೆಯೋ ಇಲ್ಲವೋ ತಿಳಿಯುವ ಗೋಜಿಗೆ ಹೋಗಲಿಲ್ಲ, ಆದರೆ ಮೀಸೆ ಜೊತೆಗೇ ಹುಟ್ಟಿಕೊಂಡ ಅರ್ಥಪೂರ್ಣ ಗಾದೆ, ಹಾಡು, ನಾಣ್ನುಡಿಗಳಂತೂ ಅಮೋಘ. ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ, ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ, ದೋಸೆ ತಿನ್ನುವಾಗ ಮೀಸೆ ಮುರಿವ ಹಾಗೆ, ರಾಜನಿಗೆ ಮೀಸೆ ಮೇಲೆ ಕೈ ಹೋದರೆ ಸಭೆಯೇ ಕಾಣುವುದಿಲ್ಲ, ಮೀಸೆ ಬಂದವನಿಗೆ ದೇಶ ಕಾಣದು ಹೀಗೆ ಅನುಭವದ ನುಡಿಮುತ್ತುಗಳು.

ಮೀಸೆಯ ವ್ಯಾಮೋಹ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಮಂಗಲ್ ಪಾಂಡೆಯ (ಅಮೀರ್ ಖಾನ್ ನಟಿಸಿರುವ ಚಲನಚಿತ್ರ) ಮೀಸೆಯನ್ನು ಅತ್ಯಂತ ಕುತೂಹಲವಾಗಿ ಗಮನಿಸಿ ಅವನಂತೆ ಮೀಸೆಯನ್ನು ಬೆಳೆಯಲು ಬಿಟ್ಟು ದಿನವೂ ಪರೀಕ್ಷಿಸುತ್ತಿದ್ದೆ, ಮೀಸೆಯ ತುದಿಯನ್ನು ಆಗಾಗ ತಿರುವುತ್ತ ನೀವುತ್ತಿದ್ದೆ. ವಿರಜಾ ಮೀಸೆಯಿಂದ ಸದ್ಯಕ್ಕೆ ಸಿಂಗಮ್ ಮೀಸೆ ಹೊತ್ತಿರುವೆ, ಮೀಸೆಯ ವೈವಿಧ್ಯತೆ ಹಾಗು ಅದರ ಪಟ್ಟಿ ಬೆಳೆಯುತ್ತ ಹೋಗುತ್ತದೆ, ಚಾಪ್ಲಿನ್ ಮೀಸೆ, ಗಿರಿಜಾ ಮೀಸೆ, ಚಿಗುರು ಮೀಸೆ, ಹುರಿಮೀಸೆ, ಕುರಿ ಮೀಸೆ, ಬೆಕ್ಕಿನ ಮೀಸೆ, ಜಿರಳೆ ಮೀಸೆ, ವಿರಜಾ ಮೀಸೆ, ಕಡ್ಡಿ ಮೀಸೆ, ಬಂಗಾರು ಮೀಸೆ, ಮೊಟ್ಟೆ ಮೀಸೆ, ಪೊದೆಮೀಸೆ, ಫಿಲ್ಟರ್ ಮೀಸೆ ಲೆಕ್ಕ ಹಾಕುತ್ತಾ ಹೋದಲ್ಲಿ ದೊಡ್ಡ ಪಟ್ಟಿಯೇ ಬೆಳೆದೀತು. ನನ್ನ ಮೀಸೆ ಸವರಿಕೊಂಡು "ಮುಂದೆ ನನ್ನ ಈ ಮೀಸೆ ಯಾವ ವೈವಿಧ್ಯತೆಗೆ ಪ್ರಯೋಗಿಸಲಿ ಎಂದು ಪ್ರಶ್ನೆ ಉದ್ಭವಿಸಿದೆ, ಸೂರ್ಯವಂಶದ ವಿಷ್ಣುವಿನ ತರಹ ಗಿರಿಜಾ ಮೀಸೆಯ ಮೇಲೆ ಅತೀವ ಒಲವಿದೆ, ಪ್ರಯೋಗಿಸಲೇ ಬೇಕಿದೆ".

ಹೆಸರಿನಲ್ಲೇನಿದ್ದರೂ ಕಾಲ ಕಾಲಕ್ಕೆ ತಕ್ಕಂತೆ ತನ್ನ ರೂಪು, ಲಾವಣ್ಯಗಳನ್ನು ಬದಲಾಯಿಸುತ್ತಲೇ ಬಂದಿದೆ ಈ ಮೀಸೆ.

ನನ್ನ ಬಾಲ್ಯದಲಿ ನಾ ಹೆದರುತ್ತಿದ್ದದ್ದು ಬಾಡಿಗೆ ಮನೆಯ ಹತ್ತಿರವಿದ್ದ "ಲಾಲು" ಎಂಬ ಬೃಹದಾಕಾರದ, ಡೊಳ್ಳುಹೊಟ್ಟೆಯ ಬಟ್ಟೆ ವ್ಯಾಪಾರಿಯ ಮೀಸೆಯನ್ನು ಕಂಡು, ಊರಿನಲ್ಲಿ ಹೆದರುತ್ತಿದ್ದದ್ದು ನನ್ನ ಮಾವನವರ ಗಿರಿಜಾ ಮೀಸೆಯನ್ನು ಕಂಡು. ಇಂದು ಆ ಮೀಸೆಗಳಿಗೆ ನಾ ಹೆದರುತ್ತಿದ್ದುದು ಎಂದು ನೆನೆದರೆ ನಗು ಬರುತ್ತದೆ.

ಮೀಸೆಯಿಂದಲೇ ಪ್ರಸಿದ್ಧಿ ಅಲ್ಲವೇ ಮತ್ತೆ, ದಶಕದ ಹಿಂದಿನ ಸೂರ್ಯವಂಶ, ಯಜಮಾನ ಚಲನಚಿತ್ರದಲ್ಲಿ ವಿಷ್ಣುವಿಗೆ ಭರ್ಜರಿ ಮೀಸೆ, ಅದು ಮೆರಗೂ ನೀಡಿತ್ತು. ಇನ್ನು ಕಮಲ್ ಹಾಸನ್ ನ ವಿರುಮಾಂಡಿ ಮೀಸೆ ಎನ್ನಿ, ಸೂರ್ಯನ ಸಿಂಗಮ್ ಮೀಸೆ ಎನ್ನಿ, ಆಗಿನ ವೀರಪ್ಪನ್ ನ ದೊಡ್ಡ ಗಿರಿಜಾ ಮೀಸೆ ಎನ್ನಿ ಹಾಗೆ ಹಿಟ್ಲರ್ ನ ಮೀಸೆ ಎನ್ನಿ. ಇವರೀರ್ವರು ಗಾಳಿಗೆ ಹಾರಿ ಹೋಗುವಂತಹ ಸಣಕಲು ದೇಹಿಗಳು, ನರಹಂತಕರು. ಒಬ್ಬನಿಗೆ ಗಿರಿಜಾಮೀಸೆ ಮತ್ತೊಬ್ಬನಿಗೆ ಮೂಗಿನ ಹೊಳ್ಳೆಗೆ ಸರಿಯಾಗಿ ಅಂಟಿದ ಮೀಸೆ. ಆ ಮೀಸೆ ನೋಡಿಯೇ ಗಡ-ಗಡ ಎಂದು ನಡುಗುತ್ತಿದ್ದರೆನೋ ಜನ. ಅತ್ತ ದರಿ, ಇತ್ತ ಪುಲಿ ಜೊತೆಗೆ ಸದಾ ತೂಗು ಕತ್ತಿ ನೆತ್ತಿಯ ಮೇಲೆ. ಈರ್ವರೂ ಸತ್ತಾಗ ಅಯ್ಯಪ್ಪಾ ಅಂತೂ ನೀ ಸತ್ಯಲ್ಲಪ್ಪಾ ಎಂದು ನಿಟ್ಟುಸಿರು ಬಿಟ್ಟು ತಮಗೆ ಇದ್ದ ಬದ್ದ ಮೀಸೆ ತೀಡಿದವರೆಷ್ಟೋ ಈಗ ನನ್ನ ಸರದಿ ನಾನು ತೀಡುತ್ತಿದ್ದೇನೆ.

ರಾಜಾ ಮೀಸೆ ಅಂತ ಹೆಸರೇನೋ ಇದೆ ಆದರೆ, ಪೌರಾಣಿಕ ಪಾತ್ರದಲ್ಲಿನ ರಾಮ, ಕೃಷ್ಣ, ವಿಷ್ಣು, ಶಿವನಿಗೆ, ಜೊತೆಗೆ ಇಂದ್ರಾದಿ ದೇವತೆಗಳೂ ಕ್ಲೀನ್‌ಶೇವ್ಡ್. ಸೀತೆ, ರುಕ್ಮಿಣಿ, ಲಕುಮಿ, ಗಿರಿಜೆ ಮತ್ತು ಅಪ್ಸರೆಯರ ಅನುಮತಿ ಸಿಕ್ಕಲಿಲ್ಲವೇ ಅಥವಾ ಮೀಸೆ ಇಲ್ಲದ್ದು ಅವರಿಗೆ ವರವೇ-ಶಾಪವೇ? ಬ್ರಹ್ಮ ಮಾತ್ರ ಇದಕ್ಕೆ ಹೊರತು-ಮೀಸೆ, ಗಡ್ಡ ಎರಡೂ ಜಗತ್ತಿರುವವರೆಗು. ಋಷಿ ಮುನಿಗಳೂ ಬ್ರಹ್ಮನ ಅನುಯಾಯಿಗಳು. ದಾನವರಿಗಂತೂ ಭರ್ಜರಿ ಮೀಸೆ. ಮೀಸೆಗೂ ಸ್ವಭಾವಕ್ಕೂ ಹೊಂದಾಣಿಕೆ ಇದೆಯಾ? ನನ್ನಂತೆ ಮೀಸೆಯಿದ್ದವರಿಗೆ ಇದೊಂದು ಪ್ರಯೋಗಾತ್ಮಕದ ವಿಷಯ. ಶಿವನೂ ಮೀಸೆಯನ್ನು ಬಿಟ್ಟಂತಿಲ್ಲ ಆದರೂ ಗಿರಿಜಾ ಮೀಸೆಗೆ ಗಿರಿಜೆಯ ಹೆಸರು ಹೇಗೆ ಕೂಡಿಕೊಂಡಿತೊ ಆ ಶಿವನೇ ಬಲ್ಲ, ಅಲ್ಲವೆ?

ಕೆಲವರಿಗೆ ಬೆಕ್ಕಿನ ಪ್ರವೃತ್ತಿ, ಉಣ್ಣುವುದು-ತಿನ್ನುವುದು ಎಲ್ಲಾ ಬೆಕ್ಕಿನ ಥರಹವೇ! ಅವರ ಮೀಸೆ ಕೂಡ ಹಾಗೆಯೇ ಏಕೆಂದರೆ ಅವರಿಗೆ ಜಾಸ್ತಿ ಮೀಸೆ ಬೆಳೆಯೋದಿಲ್ಲ, ಆದಕಾರಣ ಅವರು ಮೀಸೆಯ ಜಾಗದಲ್ಲಿ ಅಡ್ಡಡ್ಡ ತಿರುವಿದ ಉದ್ದನೆಯ ಕೆಲವು ಕೂದಲನ್ನು ಬಿಟ್ಟಿರುತ್ತಾರೆ. ಇಂಥವರಿಗೆ ತಲೆಯೂ ಕೂಡ ನವಿಲು ಕೋಸಿನಥರ ಅದರ ಮೇಲೆ ನಾಲ್ಕೇ ನಾಲ್ಕು ಕೂದಲು.

ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾಣಸಿಗುವ ನಾ ಮೇಲೋ ತಾ ಮೇಲೋ ಎಂದು ತಿರುತಿರುವಿ ಬಿಡುವ ತುದಿ ಮೇಲಾದ ಮೀಸೆ ಹುರಿ ಮೀಸೆ! ಉದ್ದ ಹುರಿಯಂತೆ ತಿರುತಿರುವಿ ಬಿಡುವ ಈ ಮೀಸೆಯಲ್ಲಿ ಏನೋ ಸಾಧಿಸಿದ ಹಂಬಲವಿರುತ್ತದೆ, ಅದೇ ಬರಗಾಲ ಬಂದರೂ ಮೀಸೆಗೆ ಬರಗಾಲವಿಲ್ಲ ಅಲ್ಲಿ!

ಈಗೀಗ ಕುದುರೆ ಲಾಳಾಕೃತಿಯ ಮೀಸೆ ಬೆಳೆಸಿ ಅದನ್ನು ಗಡ್ಡಕ್ಕೂ ಸೇರಿಸಿ ಮಧ್ಯದಲ್ಲಿ ಸಣ್ಣ ಬಕ್ರೀ ಕಾ ಗಡ್ಡ ಎಂಬ ಕುರಿ ಗಡ್ಡವನ್ನು ಕೆಳತುಟಿಯ ಕೆಳಗೆ ಬಿಟ್ಟು ಮೆರೆಯುತ್ತಾರೆ!

ಅಂದಹಾಗೆ ನಾನು ಮೂವತ್ತರ ಕೊನೆಯ ಘಟ್ಟದಲ್ಲಿದ್ದೇನೆ, ಈಗಲೆ ಮೀಸೆಯು ಹಣ್ಣಾದಂತೆ ಭಾಸವಾಗುತ್ತಿದೆ, ಎಲ್ಲೊ ಮೀಸೆಯ ಮಧ್ಯೆ ಒಂದೊಂದು ಕೂದಲಿಗೆ ಬಿಳಿ ನೆರೆಯು ತಟ್ಟಿದೆ, ನೆರೆಯು ಸಣ್ಣದಾಗಿ ಘಾಸಿ ಮಾಡಿ ಅದರ ಕೌಶಲತೆ ಹಾಗು ಅದರ ಅಂದವನ್ನು ಹಾಳು ಮಾಡುತ್ತಿದೆ ಎಂದು ಅನಿಸುತ್ತಿದೆ. ಐವತ್ತರ ನಂತರ ಸಂಪೂರ್ಣ ಬಿಳಿ ನೆರೆಯು ಮೆರೆದಾಗ ವಿರಜಾ ಮೀಸೆಯನ್ನೊ ಅಥವಾ ಗಿರಿಜಾ ಮೀಸೆಯನ್ನೊ ಸರಿಯಾಗಿ ನಿರ್ವಹಿಸಿದರೆ ಮತ್ತೊಮ್ಮೆ ಮೀಸೆಯ ಮೇಲೆ ವ್ಯಾಮೋಹ ದುಪ್ಪಟ್ಟಾಗುತ್ತದೆ. ಈ ವೈವಿಧ್ಯತೆಯ ಮೀಸೆಯ ವ್ಯಾಮೋಹ ಕುಗ್ಗದಿರಲಿ, ಮೀಸೆಯನ್ನು ಬೆಳೆಸುವ ಉತ್ಸಾಹ ಇಮ್ಮಡಿಸಲಿ, ಗಡ್ದವನ್ನು ಹೊರತುಪಡಿಸಿ :-) ಎಂದು ಆ ಬ್ರಹ್ಮನಲ್ಲಿ ಹಲುಬುತ್ತೇನೆ.

ಮೀಸೆಯಿದ್ದವನಿಗೆ ಗೊತ್ತು ಮೀಸೆಯ ಮೀಮಾಂಸೆ !!

Labels:

ಸಾಹಿತ್ಯ ಕಣಜ - ೧



'ಉತ್ತರಕಾಂಡ’

'ಉತ್ತರಕಾಂಡ’ವು ರಾಮನಿಂದ ಹೊರದೂಡಲ್ಪಟ್ಟ ಸೀತೆಯು ಆಶ್ರಮದಲ್ಲಿ ಲವಕುಶರಿಗೆ ಮೊಲೆಯೂಡಿಸುವ ದೃಶ್ಯದಿಂದ ಆರಂಭಗೊಳ್ಳುತ್ತದೆ. ಪ್ರೇಮ ಅಂದರೆ ಏನು? ರಾಮ-ಸೀತೆಯರ ಸಂಬಂಧ ಪ್ರೇಮಮೂಲದ್ದೇ ಅಥವಾ ಕೇವಲ ಧರ್ಮಮೂಲದ್ದೇ? ಲಕ್ಷ್ಮಣ-ಊರ್ವಿುಳೆಯರ ಸಂಬಂಧದ ವ್ಯಾಖ್ಯಾನ ಮತ್ತು ಸೀತೆಯ ವ್ಯಕ್ತಿತ್ವ, ಅವಳ ಹೆಣ್ಣುತನ, ಮುಗ್ಧತೆ, ಅವಳ ಪತ್ನಿತ್ವ ಇವು ಇಲ್ಲಿನ ಪ್ರಮುಖ ಸಂಗತಿಗಳು. ವಾಲ್ಮೀಕಿ ರಾಮಾಯಣದಲ್ಲಿ ಹೇಳದೇ ಓದುಗರ ಊಹೆಗೆ ಬಿಟ್ಟಿರುವ ಅನೇಕ ಪ್ರಸಂಗಗಳನ್ನು ಇಲ್ಲಿ ಭೈರಪ್ಪನವರು ವಿಸ್ತರಿಸಿಕೊಂಡಿದ್ದಾರೆ.

Friday, July 20, 2012

ಬಿಜೆಪಿ ಸರಕಾರದ ಆಡಳಿತ - ಒಡೆದ ಮನೆಯಲ್ಲಿ ಸ್ವಾರ್ಥದ ರಾಜಕಾರಣ.


ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು  ನಾಲ್ಕು ವರ್ಷಗಳು ಪೂರೈಸಿ,ಐದನೆ ವರ್ಷಕ್ಕೆ ಕಾಲಿಟ್ಟಿದೆ. ರಾಜ್ಯ ರಾಜಕಾರಣದಲ್ಲಿ ಇನ್ನೊಂದು ಮಹಾ ಬಿರುಗಾಳಿ ಬೀಸುವ ಸೂಚನೆಗಳು ಕಾಣಿಸಿಕೊಳ್ಳುತ್ತಿದೆ. ಬಿಜೆಪಿಯ ಆಕಾಶದಲ್ಲಿ ಮತ್ತೆ ಮೋಡಕವಿದಿದೆ.ಈ ಬಾರಿಯ ಸುಂಟರಗಾಳಿ ರಾಜ್ಯ ಸರಕಾರದ ಪಾಲಿಗೆ ಸುನಾಮಿಯಾಗಿ ಪರಿವರ್ತನೆಯಾಗುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ. ಬಿಜೆಪಿಯೊಳಗಿನ ಭಿನ್ನಮತ,  ಪಕ್ಷದೊಳಗಿನ ಆಂತರಿಕ ಕಚ್ಚಾಟ, ನಾಯಕತ್ವಕ್ಕಾಗಿ ನಡೆಯುತ್ತಿರುವ ಗುದ್ದಾಟ, ಭಿನ್ನಮತ, ರೇಸಾರ್ಟ್ ರಾಜಕೀಯ ಶಮನವಾಗಿಲ್ಲ.ನಾಯಕತ್ವ ಬದಲಾವಣೆಗಾಗಿ ಯಡಿಯೂರಪ್ಪನವರ ಸಮರ ಇನ್ನಷ್ಟು ತೀವ್ರವಾಗಿದೆ.ಮುಖ್ಯಮಂತ್ರಿ ಸದಾನಂದ ಗೌಡರ ತಲೆದಂಡ ಕೇಳುತ್ತಲೇ ಬಿಜೆಪಿಯೊಳಗೆ ಸಮರ ಸಾರಿರುವ ಯಡಿಯೂರಪ್ಪ ಹಾಗೂ ಅವರ ಬಣ,ಮತ್ತೆ ಹೋರಾಟವನ್ನು ತೀವ್ರಗೊಳಿಸಲು ವೇದಿಕೆ ಸಿದ್ಧಪಡಿಸಿಕೊಂಡಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ತಮ್ಮ ಹಾಗೂ ತಮ್ಮ ಆಪ್ತರ ನಿವಾಸ ಕಚೇರಿ,ಸಂಸ್ಥೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಎಫ್‌ಐಆರ್ ದಾಖಲಿಸಿದ್ದರೂ, ಹೋರಾಟವನ್ನು ಸಡಿಲಗೊಳಿಸದ ಯಡಿಯೂರಪ್ಪ, ತಮ್ಮ ಆಪ್ತರಾಗಿರುವ ಜಗದೀಶ್ ಶೆಟ್ಟರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಸಮರಕ್ಕಿಳಿದಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ವರ್ಷ ಹೊರತುಪಡಿಸಿದರೆ ಉಳಿದ ಮೂರು ವರ್ಷಗಳಲ್ಲಿ ಆಂತರಿಕ ಬಿಕ್ಕಟ್ಟು, ಪರಸ್ಪರ ಕಾಲೆಳೆಯುವುದು, ಸರ್ಕಾರ ಉರುಳಿಸುವ ಉಳಿಸಿ ಕೊಳ್ಳುವ ಹೋರಾಟ, ಭ್ರಷ್ಟಾಚಾರ, ಹಗರಣಗಳ ಸರಮಾಲೆಯೇ ಪ್ರಮುಖವಾಗಿ ಆಡಳಿತ ಮತ್ತು ಅಭಿವೃದ್ಧಿ ಎಂಬುದು ಮಾತುಗಳಲ್ಲೇ ಉಳಿಯಿತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಏಕೆಂದರೆ, ಸರ್ಕಾರದ ನೇತೃತ್ವ ವಹಿಸಿದ್ದ ಯಡಿಯೂರಪ್ಪ ಅವರು ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರಲ್ಲದೆ, ಗುಜರಾತ್ ಮಾದರಿ ಆಡಳಿತ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ನಾನಾ ಕಸರತ್ತುಗಳ ಮೂಲಕ ಸರ್ಕಾರ ಉಳಿಸಿಕೊಂಡಿದ್ದೇ ದೊಡ್ಡ ಸಾಧನೆ ಯಾದರೆ, ನಂತರವೂ ಹಗರಣಗಳ ಸರಮಾಲೆಯೇ ಮುಂದುವರಿಯಿತು.

ಮೊದಲನೆ ವರ್ಷ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನರು ಇಟ್ಟಿದ್ದ ನಿರೀಕ್ಷೆಗಳನ್ನು ಉಳಿಸಿ ಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡಿದ ವರ್ಷವಿದು. ಸಾಲು ಸಾಲಾಗಿ ಬಂದ ಚುನಾವಣೆಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದ್ದು ನಿಜವಾದರೂ, ಮುಂದಿನ ದಿನಗಳಲ್ಲಿ ಸರ್ಕಾರದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿಸಿತ್ತು. ಹೀಗಾಗಿ ಮೊದಲ ವರ್ಷ ಪೂರೈಸುತ್ತಿದ್ದಂತೆ ಸರ್ಕಾರ ವಿಕಾಸ ಸಂಕಲ್ಪ ಉತ್ಸವ ಆಯೋಜಿಸಿ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಕಾರ್ಯಕ್ರಮಗಳನ್ನು ರೂಪಿಸಿತ್ತು. ಎರಡನೇ ವರ್ಷದಲ್ಲಿ ಸರಕಾರಕ್ಕೆ ಸಂಕಷ್ಟಗಳು ಎದುರಾದವು, 2009ರ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ ಉಂಟಾಗಿ ಲಕ್ಷಾಂತರ ಜನರ ಬದುಕು ನೀರಿನಲ್ಲಿ ಮುಳುಗುತ್ತಿದ್ದಾಗ ಆಡಳಿತ ನಡೆಸುವವರು ಚಿಂತನಾ ಬೈಠಕ್‌ನಲ್ಲಿ ತಲ್ಲೀನರಾಗಿದ್ದರು. ನೆರೆ ಸಂತ್ರಸ್ತರು ಬದುಕಿದರೆ ಸಾಕು ಎನ್ನುವ ಸ್ಥಿತಿಯಲ್ಲಿರುವಾಗ ಗಣಿ ಲಾಬಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಿತು. ಮೂರನೇ ಅಧಿಕಾರದ ವರುಷ ಹಗರಣ, ಡಿನೋಟಿಫಿಕೇಶನ್, ಅಕ್ರಮ ಗಣಿಗಾರಿಕೆಯ ವರ್ಷವಾಯಿತೆ ಹೊರತು ಸಾಧನೆಯ ಮೂರು ವರ್ಷ ಆಗಲೇ ಇಲ್ಲ. ಭೂ ಹಗರಣಗಳು ಒಂದೊಂದಾಗಿ ಹೊರಬರಲಾರಂಭಿಸಿದವು. ಇದು ಎಷ್ಟರ ಮಟ್ಟಿಗೆ ತೀವ್ರಗೊಂಡಿತ್ತು ಎಂದರೆ, ಆಡಳಿತದಲ್ಲಿರುವವರ ಭ್ರಷ್ಟಾಚಾರ ವಿರೋಧಿಸಿ ಒಂದು ಗುಂಪು ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯಿತು. ನಾಲ್ಕನೇ ವರ್ಷದಲ್ಲಿ ಕೆಲಸ ಆಗಿದೆ ಎನ್ನುವುದಕ್ಕಿಂತ ಸರ್ಕಾರ ಇನ್ನೂ ಉಳಿದು ಕೊಂಡಿದೆ ಎಂಬುದೊಂದೇ ಸಾಧನೆ. ರು.1 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ ಒಂದು ಹೆಗ್ಗಳಿಕೆ ಬಿಟ್ಟರೆ ಹಿಂದಿನ ವರ್ಷದ ಬಜೆಟ್ ಅನುಷ್ಠಾನ, ಯೋಜನೆಗಳ ಜಾರಿ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಮುಖ್ಯಮಂತ್ರಿ ಹುದ್ದೆಗಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಆರಂಭವಾದ ಯಡಿಯೂರಪ್ಪ ಅವರ ಹೋರಾಟ ಇದುವರೆಗೂ ಸರ್ಕಾರ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಲೇ ಇಲ್ಲ. ಎರಡು ಗುಂಪುಗಳ ನಡುವಿನ ಗುಂಪುಗಾರಿಕೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ.  ಒಂದೆಡೆ ಜನರು ಮಳೆಯಿಲ್ಲ ಎಂದು ಕೂಗೆಬ್ಬಿಸುತ್ತಿದ್ದರೆ ಇನ್ನೊಂದೆಡೆ ಸರಕಾರದೊಳಗೆ ಯಾರು ಮುಖ್ಯ ಮಂತ್ರಿಯಾಗಬೇಕು ಎನ್ನುವ ಕುರಿತಂತೆ ಭಾರೀ ಚರ್ಚೆಯೆದ್ದಿದೆ. ಅಳಿದುಳಿದ ಒಂದು ವರ್ಷವನ್ನಾದರೂ ರಾಜ್ಯ ಬಿಜೆಪಿ ಸರಕಾರ ಜನರಿಗಾಗಿ ಮೀಸಲಿಡುತ್ತದೆಯೋ ಎಂದು ಯೋಚಿಸಿದರೆ, ಅಂತಹ ಯಾವ ಆಸೆಯನ್ನೂ ಇರಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು. ಈವರೆಗೆ ಮುಖ್ಯಮಂತ್ರಿಯಾಗುವ ಆಸೆ ಯಡಿಯೂರಪ್ಪನವರದು ಮಾತ್ರವಾಗಿತ್ತು. ಆದರೆ ಇದೀಗ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿರುವವರ ಸಂಖ್ಯೆ ಒಮ್ಮಿಂದೊಮ್ಮೆಗೆ ಹೆಚ್ಚಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾದರೆ, ಸಂಪುಟ ವಿಸ್ತರಣೆ, ಪ್ರಮಾಣವಚನ ಸ್ವೀಕಾರ ಇತ್ಯಾದಿ ಇತ್ಯಾದಿಗಳಿಗಾಗಿ ಆರು ತಿಂಗಳು ವ್ಯಯವಾಗುತ್ತದೆ. ಈ ನಾಲ್ಕೈದು ವರ್ಷಗಳಲ್ಲಿ ಏನನ್ನೂ ಮಾಡಲು ಸಾಧ್ಯವಾಗದವರು ಇನ್ನುಳಿದ ಒಂದು ವರ್ಷದಲ್ಲಿ ಏನನ್ನು ಸಾಧಿಸಿಯಾರು? ಆದರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆಯೆಂದರೆ ಅದರ ಉದ್ದೇಶ, ಜನರ ಸೇವೆಯಲ್ಲ. ಇರುವಷ್ಟು ದಿನ ನಾಡನ್ನು ದೋಚುವುದಷ್ಟೇ ಅವರ ಗುರಿ.

ಈ ಎಲ್ಲ ಕಾರಣಗಳಿಂದ ಬೇಸತ್ತ ವರಿಷ್ಠರು ಕರ್ನಾಟಕದ ಕಡೆಗೆ ತಲೆ ಹಾಕುವುದಕ್ಕೂ ಹೆದರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ಭಿನ್ನಮತವನ್ನು ತಣಿಸುವ ಒಂದೇ ಒಂದು ಉಪಾಯವೆಂದರೆ ಸರಕಾರವನ್ನು ತಕ್ಷಣವೇ ವಿಸರ್ಜಿಸುವುದು. ತೇಪೆ ಹಚ್ಚುವುದರಿಂದ ಬಿಜೆಪಿ ಸರಕಾರದ ಯಾವ ಸಮಸ್ಯೆಯೂ ಇತ್ಯರ್ಥವಾಗುವುದಿಲ್ಲ. ಸರಕಾರ ಮುಂದುವರಿದಷ್ಟು ಬಿಕ್ಕಟ್ಟು ಜಾಸ್ತಿಯಾಗುತ್ತಾ ಹೋಗುತ್ತದೆ. ಅದರ ಬದಲು ಯಾರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸುವುದು ಎನ್ನುವುದರ ಕಡೆಗೆ ಬಿಜೆಪಿ ವರಿಷ್ಠರು ತಲೆ ಕೊಟ್ಟರೆ ಪಕ್ಷಕ್ಕೂ ನಾಡಿಗೂ ಅದರಿಂದ ಒಳಿತಿದೆ. ಮುಖ್ಯಮಂತ್ರಿ ಸ್ಥಾನ ಬದಲಿಸಿದರೂ, ಬದಲಿಸದಿದ್ದರೂ ಅದರ ಪರಿಣಾಮ ಒಂದೇ ಎಂದ ಮೇಲೆ ಸರಕಾರ ವಿಸರ್ಜಿಸಿ ಮಧ್ಯಾಂತರ ಚುನಾವಣೆಗೆ ಅಣಿಯಾಗುವುದೇ ಜಾಣತನ. ಮೊದಲು ಸರಿಯಾಗಬೇಕಾದವರು ದಿಲ್ಲಿಯ ವರಿಷ್ಠರು.ಬಳಿಕವಷ್ಟೇ ರಾಜ್ಯವನ್ನು ಅವರು ಸರಿಪಡಿಸಬಹುದು.ಒಟ್ಟಿನಲ್ಲಿ, ಸದ್ಯದ ಸ್ಥಿತಿಯಲ್ಲಿ ಸರಕಾರ ಮುಂದುವರಿಯುವುದಕ್ಕಿಂತ ವಿಸರ್ಜನೆ ಬಿಜೆಪಿಯ ಆರೋಗ್ಯಕ್ಕೆ ಹೆಚ್ಚು ಒಳಿತು. ಕನಿಷ್ಠ ಇನ್ನು ಹತ್ತು ವರ್ಷಗಳ ಕಾಲ ಅಧಿಕಾರವಿಲ್ಲದೆ ವಿರೋಧ ಪಕ್ಷದಲ್ಲಿ ಕುಳಿತರೆ ಮಾತ್ರ ಬಿಜೆಪಿ ಮತ್ತೆ ಚಿಗುರಿಕೊಳ್ಳಬಹುದು. ಕಳೆದುಕೊಂಡ ತನ್ನ ಶಕ್ತಿಯನ್ನು ಮರಳಿ ಪಡೆಯಬಹುದು. ಇಲ್ಲವಾದರೆ, ಅದು ಕೊಳೆತು ರಾಜ್ಯದಲ್ಲಿ ಸರ್ವನಾಶವಾಗಲಿದೆ.

ನನ್ನ ಮಗಳು ನಾಲ್ಕು ವರ್ಷದವಳಾದರು ಇಂದಿನ ಸರ್ಕಾರದ ಅವಸ್ಥೆಯನ್ನು ಕಂಡು ಬಿಜೆಪಿಯ ಕಮಲದ ದಳಗಳನ್ನು ಹಲವು ರಾಜಕೀಯ ದುರೀಣರ ವಿವಿಧ ನಿಲುವುಗಳನ್ನು ಕಂಡು ಕಾಕತಾಳೀಯವೆಂಬಂತೆ ದಳಗಳಿಗೆ ವಿಭಿನ್ನ ಬಣ್ಣಗಳನ್ನು ರಚಿಸಿ ನಮ್ಮೆಲ್ಲರ ಗಮನ ಸೆಳೆದಳು.

Saturday, June 30, 2012

ಟ್ರಾಫಿಕ್ ಕಿಕ್ಕಿರಿ - ವಾಹನ ಸವಾರರ ಅನಾಗರಿಕ ಪ್ರಜ್ಞೆ



ಎಲ್ಲರಿಗು ತಿಳಿದಿರುವಂತೆ ಇಡೀ ದೇಶದಲ್ಲೇ ಬೆಂಗಳೂರು ನಗರವು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಐಟಿ ಉದ್ಯಮಿಕೆಯ ತೀವ್ರ ಬೆಳವಣಿಗೆಯಿಂದ ಈ ನಗರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿರುವುದರಿಂದ ನಗರದ ಜನಸಂಖ್ಯೆಯಲ್ಲಿ ತೀಕ್ಷ್ಣವಾದ ಏರಿಕೆಯನ್ನು ಕಾಣಬಹುದಾಗಿದೆ. ಜನಸಂಖ್ಯೆಯು ನಗರದೊಳಗೆ ಸ್ಥಿರವಾಗಿದೆಯಾದರು ಹೊರವಲಯದಲ್ಲಿರುವ ಗ್ರಾಮೀಣ ಸ್ಥಳಗಳು ಸೂಕ್ಷ್ಮವಾಗಿ ಬೆಳೆಯುತ್ತಿದೆ . ಇದಕ್ಕೆ ಅನುಗುಣವಾಗಿ ಜನರ ವ್ಯವಹಾರದ ಚಟುವಟಿಕೆಗಳಲ್ಲಿ ವೃಧ್ದಿಯಾಗುತ್ತಿದ್ದು, ಇದರ ಪರಿಣಾಮ ವಾಹನಗಳು ಅಧಿಕಗೊಳ್ಳುತ್ತಿದ್ದು,  ವಾಹನ ಸಂಚಾರದ ಒತ್ತಡವನ್ನು ಹತ್ತಿಕ್ಕಲು ಸಂಚಾರ ಪೋಲೀಸರು ವಿವಿಧ ಕಾರ್ಯಯೋಜನೆಯನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದ್ದಾರೆ. ಎರಡು ದಶಕಗಳ ಹಿಂದೆ ನಗರದಲ್ಲಿ ಅಣಬೆಗಳಂತೆ ತಲೆ ಎತ್ತಿ ನಿಂತಿರುವ ಐಟಿ ಕಂಪನಿಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳ ತೀವ್ರ ಬೆಳವಣಿಗೆಯಿಂದ ಈಗಿನ ವಾಹನಗಳ ಸಂಖ್ಯೆ 1.50 ಮಿಲಿಯನ್‌ಗೂ ಅಧಿಕಗೊಂಡಿದ್ದು, ವಾರ್ಷಿಕ 7-10% ರಷ್ಟು ಅಧಿಕಗೊಳ್ಳುತ್ತಿದೆ. ನಗರವು ಜನಸಂಖ್ಯೆ ಹಾಗೂ ವಿಸ್ತೀರ್ಣದಲ್ಲಿ ಬೆಳದಂತೆಲ್ಲಾ, ಸಮಸ್ಯೆಗಳ ಸರಮಾಲಯೇ ಉದ್ಭವವಾಗುತ್ತಿದೆ. ಕಾರ್ ಮತ್ತು ದ್ವಿಚಕ್ರ ವಾಹನಗಳನ್ನು ಸ್ವಂತ ಓಡಾಟಕ್ಕೆ ಬಳಸುತ್ತಿರುವುದು ಸಾಮಾನ್ಯವಾಗಿದ್ದು, ಇದರಿಂದ ಸುಮಾರು ಶೇಕಡ 90% ರಷ್ಟು ನೊಂದಾಯಿಸಿದ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟು ವಾಹನಗಳ ಸಾಂದ್ರತೆಯಲ್ಲಿ ದ್ವಿಚಕ್ರವಾಹನಗಳ ಸಂಖ್ಯೆಯೇ ಶೇಕಡ 70% ರಷ್ಟಿದ್ದು, ಕಾರ್ ಶೇಕಡ 15% ರಷ್ಟು, ಅಟೋರಿಕ್ಷಾಗಳ ಸಂಖ್ಯೆ 4%ರಷ್ಟು ಹಾಗೂ ಉಳಿದ ವಾಹನಗಳಾದ ಬಸ್, ವ್ಯಾನ್ ಮತ್ತು ಟೆಂಪೋಗಳ ಸಂಖ್ಯೆ ಶೇಕಡ 8% ರಷ್ಟಿರುತ್ತದೆ. ಮುಂಬರುವ ವರ್ಷಗಳಲ್ಲಿ ವಾಹನಗಳು ದ್ವಿಗುಣದಷ್ಟು  ಹೆಚ್ಚಾದರು ಸಂಶಯವಿಲ್ಲ ಏಕೆಂದರೆ ಇತ್ತೀಚಿನ ದಿನಗಳಲ್ಲಿ ವಾಹನ ಕೊಳ್ಳುವಿಕೆಗೆ ಸಾಲವನ್ನು ನೀಡುವ ಸಂಸ್ಥೆಗಳ ವ್ಯವಸ್ಥೆಯು ಗ್ರಾಹಕರಿಗೆ ಕೈಗೆಟುಕುವಷ್ಟು ಸುಲಭ ಸಾಧ್ಯವಾಗಿದೆ. 


ವಾಹನಗಳ ದಟ್ಟಣೆಯಿಂದ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತಲಿರುವುದು ಆಘಾತಕರ ಸಂಗತಿ  ಇಂತಹ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ. ಮೊಟ್ಟ ಮೊದಲನೆಯದಾಗಿ ನಾವು ನಾಗರಿಕ ಪ್ರಜ್ಞೆಯನ್ನು ಹೊಂದುವುದು ಅತ್ಯವಶ್ಯವಾಗಿದೆ, ಎಡದಿಂದ ಎಗ್ಗಿಲ್ಲದೆ ಬಲಗಡೆಗೆ ನುಗ್ಗಿ ಸರಿಯಾದ ಪಥದಲ್ಲಿ ಚಲಾಯಿಸುವವನನ್ನು ಗಾಬರಿಗೊಳಿಸುವುದು, ದ್ವಿಚಕ್ರ ವಾಹನದವರು ಜಾಮ್ ಆದ ಕಡೆ ಫುಟ್ ಪಾತ್ ಅನ್ನು ಬಳಸಿಕೊಂಡು ಪಾದಚಾರಿಗಳಿಗೆ ಅನಾನುಕೂಲತೆಯಲ್ಲಿ ಮುಳುಗಿಸುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಅನಾಗರಿಕ ವರ್ತನೆಯಿಂದ ವಾಹನವನ್ನು ಚಲಾಯಿಸುವವ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತಹ ಪ್ರಸಂಗ ಒದಗುತ್ತಿದೆ. ನಿಲುಗಡೆಯ ದೀಪ ಹೊತ್ತಿದಾಗ ನೋಡಿಯು ನೋಡದಂತೆ ವಾಹನವನ್ನು ರಭಸವಾಗಿ ಚಲಾಯಿಸುವುದು  ಅಪಾಯಕಾರಿ ವಿಷಯವಾದರು ವಾಹನವನ್ನು ನಿಲ್ಲಿಸುವ ಪ್ರಜ್ಞೆಯನ್ನು ನಾವು ಪಾಲಿಸುತ್ತಿಲ್ಲ ಎಂಬುದು ಕಡು ಸತ್ಯ. ವಾಹನವನ್ನು ಸ್ಟಾಪ್ ಲೈನ್ ನ ಒಳಗೆ ನಿಲ್ಲಿಸುವುದನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಗೆರೆಯ ಆಚೆ ನಿಲ್ಲಿಸಿ ಪಾದಚಾರಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಎಡೆಮಾಡಿಕೊಡುತ್ತಿದ್ದೇವೆ. ದಟ್ಟಣೆ ಜಾಸ್ತಿಯಾಗುತ್ತಿದೆ ಸರಕಾರವು ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ ಎಂದು ಬೊಬ್ಬಿಡುವಲ್ಲಿ ನಾವು ಸಮರ್ಥರಾಗಿದ್ದೇವೆ ವಿನಃ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಲ್ಲಿ ಇಲ್ಲ. ಮೊದಲು ನಾವು  ಪ್ರಜ್ಞೆಯನ್ನು ಬೆಳೆಸಿಕೊಂಡು ಅದನ್ನು ಪಾಲಿಸುವಲ್ಲಿ ಸಫಲರಾಗಬೇಕು. ಕ್ರಮವಾದ ಪಥದಲ್ಲಿ ಚಲಿಸಿ ಪರಿಮಿತಿ ವೇಗದಲ್ಲಿ ವಾಹನವನ್ನು ಚಲಾಯಿಸಬೇಕಿದೆ. ನಿಯಮಪಾಲನೆಯಿಂದ ವಾಹನವನ್ನು ಚಲಾಯಿಸಿದರೆ ಟ್ರಾಫಿಕ್ ನ ಕಿಕ್ಕಿರಿಯು ಅರ್ಧ ಕಡಿಮೆಯಾಗುತ್ತದೆ ಎಂದರೆ ತಪ್ಪಾಗಲಾರದು. ಆ ಶಿಸ್ತುಪಾಲನೆಯನ್ನು ನಾವು ಪಾಲಿಸಿ ನಮ್ಮ ಯುವ ಜನಾಂಗದವರಿಗೆ ತಿಳಿಸಿ ಕಲಿಸಬೇಕಿದೆ.


ಟ್ರಾಫಿಕ್ ಕಿಕ್ಕಿರಿಯ ಸಮಸ್ಯೆಯಿಂದ ಪರಿಹಾರವನ್ನು ಅಗತ್ಯವಾಗಿ ಹುಡುಕಬೇಕಿದೆ, ಇರುವ ರಸ್ತೆಗಳನ್ನು ಸರಿಯಾಗಿ ಅಭಿವೃದ್ಧಿ ಪಡಿಸಿ, ಹಳ್ಳಕೊಳ್ಳಗಳನ್ನು ಸರಿಯಾಗಿ ಮುಚ್ಚಿಸಿ, ರಸ್ತೆಯ ಕಾಮಗಾರಿಯನ್ನು  ಭ್ರಷ್ಟತನವಿಲ್ಲದೆ ಕಾರ್ಯಯೋಜನೆಗೆ ತರುವಲ್ಲಿ ಪ್ರಾಧಿಕಾರವು ಸಫಲವಾದರೆ ಕಿಕ್ಕಿರಿಯ ಸಮಸ್ಯೆಯು ಕೊಂಚ ನಿವಾರಣೆಯಾಗುತ್ತದೆ. ರಸ್ತೆಯ ಅಗಲೀಕರಣಕ್ಕೆ ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಅವಲೋಕಿಸಬೇಕಿದೆ. ನಗರದಲ್ಲಿರುವ ರಸ್ತೆಗಳ ಪರಿಮಿತಿಯ ಸಾಮರ್ಥ್ಯವನ್ನು ಸಮರ್ಥನೀಯವನ್ನಾಗಿ ಮಾಡಲು, ಒಳ್ಳೆಯ ಅಭಿವೃದ್ಧಿ, ಅತ್ಯುತ್ತಮವಾದ ಸಾರ್ವಜನಿಕ ಸೇವೆ, ಸಂಯೋಜಿತ ಮತ್ತು ಮಲ್ಟಿಮೋಡಲ್ ಸಾರಿಗೆ ವ್ಯವಸ್ಥೆ ಅತ್ಯಗತ್ಯ. ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ಹಾಗು ಮೆಟ್ರೊ ಬಸ್ ಗಳ ಸೇವೆ ಗಣನೀಯವಾಗಿ ಟ್ರಾಫಿಕ್ ಜಾಮ್ ಅನ್ನು ಕಡಿಮೆ ಮಾಡಬಹುದು. ರಾಮನಗರ, ದೊಡ್ಡಬಳ್ಳಾಪುರ, ತುಮಕೂರು ಸ್ಥಳಗಳಿಗೆ ಈಗಿರುವ ರೈಲ್ವೆಯ ಮೂಲ ಸೌಕರ್ಯಗಳನ್ನು ಬಳಸಿಕೊಂಡು ರೈಲಿನ ಆವರ್ತನವನ್ನು ಅನುಗುಣಕ್ಕನುಸಾರವಾಗಿ ಆ ಸ್ಥಳಗಳಿಗೆ ಉಪಯೋಗಿಸಿಕೊಂಡಲ್ಲಿ ಟ್ರಾಫಿಕ್ ಕಿಕ್ಕಿರಿಯನ್ನು ಕಡಿಮೆ ಮಾಡಬಹುದು.


ಶಿಸ್ತು ಬದ್ಧವಾಗಿ ಕ್ರಮಗಳನ್ನು ಪಾಲಿಸಿಕೊಂಡು ಬಂದಲ್ಲಿ ಸಮಸ್ಯೆಗಳು ಉಲ್ಬಣಿಸುವ ಪ್ರಮೇಯವೇ ಇರುವುದಿಲ್ಲ, ಅಪಘಾತಗಳು ಕೂಡ ಕ್ಷೀಣಿಸುತ್ತವೆ ಆ ನಿಟ್ಟಿನಲ್ಲಿ ಹೊಸ ವರುಷದಂದು ಕ್ರಮ ಬದ್ಧವಾದ ಹಾಗು ಶಿಸ್ತ್ಯಾನುಸಾರವಾಗಿ ವಾಹನವನ್ನು ಚಲಾಯಿಸುವ  ಸಂಕಲ್ಪವನ್ನು ಹಮ್ಮಿಕೊಳ್ಳಬೇಕಾಗಿದೆ.

Saturday, October 8, 2011

ಆ ದಿನದ ಸಂಚಿಕೆಯಿಲ್ಲ...ತೊಳಲಾಟ ನಿಲ್ಲುವುದಿಲ್ಲ

ವಿಜಯದಶಮಿಯ ದಿನ ಎಂದಿನಂತೆ ಬೆಳಿಗ್ಗೆ ಎದ್ದು ಬೆಳಗಿನ ಕಾರ್ಯಗಳನ್ನು ಮುಗಿಸಿ ಕಾಫಿ ಲೋಟವನ್ನು ಹಿಡಿದು ದಿನಪತ್ರಿಕೆಗಾಗಿ ಜಾಲಾಡಲು ಶುರುಮಾಡಿದೆ, ಇನ್ನು ಪೇಪರ್ ಹಾಕುವ ಹುಡುಗ ದಿನಪತ್ರಿಕೆಯನ್ನು ಹಾಕಿಲ್ಲವೇನೋ ಎಂದು ಮನಸ್ಸಿನಲ್ಲೆ ಹೇಳಿಕೊಂಡು ಹುಡುಕಲು ಯತ್ನಿಸಿದೆ, ಸಿಗಲಿಲ್ಲ. ಸಾಮಾನ್ಯವಾಗಿ ಪೇಪರ್ ಹಾಕುವ ಹುಡುಗ ಮಹಡಿಯ ಮೊಗಸಾಲೆಗೆ ಬಿಸಾಡುವ ಪ್ರಸಂಗ ಹೆಚ್ಚು ಎಂದು ತಿಳಿದು ಮೊಗಸಾಲೆಗೆ ಹೋಗಿ ನೋಡಿದರು ಪತ್ರಿಕೆಯ ಸುಳಿವಿಲ್ಲ. ಧರ್ಮಪತ್ನಿ ಒಗೆದಿದ್ದ ಬಟ್ಟೆಯನ್ನು ಹರಗಲು ಮೊಗಸಾಲೆಗೆ ಆಗಮಿಸಿದಾಗ ನಾನು ಪತ್ರಿಕೆಯವನಿಗಾಗಿ ಕಾಯುತ್ತಿರುವುದನ್ನು ಕಂಡು "ಏನು ಇಲ್ಲಿ ನಿಂತಿದ್ದೀರಿ?" ಎಂದು ಪ್ರಶ್ನಿಸಿದಳು. ನಾನು ಉತ್ತರವಿತ್ತೆ "ಪತ್ರಿಕೆಯವ ಇನ್ನು ಬರಲಿಲ್ಲವಲ್ಲ" ಎಂದೆ, ಅವಳು ಪುನರುಚ್ಚಿಸಿದಳು "ಎಲ್ರೀ ಬರ್ತಾನೆ, ಇವತ್ತು ಪತ್ರಿಕೆ ಬರೊಲ್ವಲ್ಲ, ನೆನ್ನೆ ಆಯುಧ ಪೂಜೆ ನಿಮಿತ್ತ ರಜೆ ಅಲ್ವೆ? " ಎಂದಳು. ಹೌದಲ್ಲ, ನೆನ್ನೆ ತಾನೆ ಓದಿದ್ದ ನಾನು ಅಷ್ಟು ಬೇಗ ಮರೆತೆನೆ? ಎಂದು ಹಿಂದಿನ ದಿನದ ಬೆಳಗಿನ ಜಾವದ ಸಂದರ್ಭವನ್ನು ನೆನೆಸಿಕೊಂಡು ಒಳಗೆ ಬಂದೆ. ಬೆಳಗಿನ ಜಾವದ ಅಭ್ಯಾಸಬಲದಿಂದ ಮೊದಲು ಹುಡುಕುವುದೆ ಆ ದಿನದ ದಿನಪತ್ರಿಕೆಯನ್ನು, ವಾಚಕನ ದಿನಚರಿಯೆ ಹಾಗಲ್ಲವೆ?

ಒಳಗೆ ಬಂದರೆ ಕುಳಿತುಕೊಳ್ಳಲಾಗುತ್ತಿಲ್ಲ, ಕಾಫಿ ಹೀರುತ್ತಿದ್ದರು ಅದರ ರುಚಿಯು ಮನಸ್ಸಿಗೆ ನಾಟುತ್ತಿಲ್ಲ, ಅಂತರ್ಜಾಲ ಮೂಲಕ ಈ - ಪೇಪರ್ ಮೂಲಕವಾದರು ಸುದ್ದಿಗಳನ್ನು ತಿಳಿಯೋಣವೆಂದರೆ ಅಲ್ಲಿಯು ಇಲ್ಲ. ಸುದ್ದಿಗಳು ಜಾಲತಾಣದಲ್ಲಿ ದೊರಕುವುದರು ಕೂಡ ಪತ್ರಿಕೆಯನ್ನು ಕೈಯಲ್ಲಿ ಹಿಡಿದಷ್ಟು ಸಂತುಷ್ಟ ಮನೋಭಾವ ಹೊಂದಲು ಸಾಧ್ಯವೇ ಇಲ್ಲ. ವಿಧಿಯಿಲ್ಲದೆ ಹತ್ತು ದಿನಗಳ ಹಿಂದಿನ ಪತ್ರಿಕೆಯನ್ನು ಓದೋಣವೆಂದು ಅಂದುಕೊಂಡು ಹಳೆಯ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ ಸಕಲ ಸುದ್ದಿಗಳು ಮನನ ಮಾಡಿದಂತೆ ಅದರ ಪದಗಳ ಲಾಲಿತ್ಯವು ಮನಸ್ಸಿಗೆ ನಾಟುತ್ತಿತ್ತು. ಕೂಡಲೇ ಎತ್ತಿಟ್ಟೆ. ನನ್ನ ತೊಳಲಾಟ ನೋಡಲಾರದೆ "ಏನ್ರಿ ! ಮುಖ್ಯವಾದ ವಸ್ತುವನ್ನು ಕಳೆದುಕೊಂಡವರ ತರಹ ಅತೃಪ್ತಿಯನ್ನು ಹೊಂದಿರುವವರಂತೆ ಕಾಣುತ್ತೀರಿ" ಎಂದಳು. "ಇವತ್ತಿನ ದಿನಪತ್ರಿಕೆ ಇಲ್ಲವಲ್ಲೆ" ಎಂದೆ. "ಅಯ್ಯೋ, ನೀವೋ...ನಿಮ್ಮ ದಿನಪತ್ರಿಕೆಯೋ.."ಎಂದು ಮೂದಲಿಸಿದಳು. "ನಿನಗೇನೆ ಗೊತ್ತು ಬಿಸಿ ಬಿಸಿ ಸುದ್ಧಿ ಹೇಳುವ ದಿನಪತ್ರಿಕೆಯ ತೂಕದ ವಿಷಯಗಳು" ಎಂದೆ. ತಲೆಚಚ್ಚಿಕೊಂಡು ತನ್ನ ಕೆಲಸದಲ್ಲಿ ಮಗ್ನಳಾದಳು. ನಾನು ನಿಂತಲ್ಲಿಯೆ ನಿಂತೆ ತೊಳಲಾಟವನ್ನು ಸಹಿಸಿಕೊಂಡು.

ದಿನವೂ ಬೆಳಿಗ್ಗೆ ಎದ್ದ ಕೂಡಲೇ ನಾವು ಕಣ್ಣಾಡಿಸುವುದು ಪತ್ರಿಕೆಯ ಮುಖ್ಯಾಂಶಗಳಲ್ಲಿ, ಸ್ನಾನ ಮಾಡುವಾಗಲು ಕೂಡ ಒಮ್ಮೊಮ್ಮೆ ಆ ಮುಖ್ಯಾಂಶದ ಒಳ ತಿರುಳುಗಳ ಯೋಚನೆ ಏನಿರಬಹುದು ಎಂದು. ಕೂಡಲೆ ಸಿದ್ಧವಾಗಿ ಪತ್ರಿಕೆಯನ್ನು ಹಿಡಿದುಕೊಂಡು ಸುದ್ದಿಗಳನ್ನು ಓದುತ್ತ ಕುಳಿತರೆ ಒಂದು ಘಂಟೆಗು ಮಿಗಿಲಾಗಿ ಸಮಯ ಕಳೆಯುವುದೆ ಗೊತ್ತಾಗುವುದಿಲ್ಲ, ಗಡಿಯಾರ ನೋಡಿಕೊಂಡು ಗಬಗಬನೆ ತಿಂಡಿ ತಿಂದು ದಡದಡನೆ ಮನೆ ಬಿಡುವ ಸಂದರ್ಭ ಹಲವು ಬಾರಿ ನನಗೆ ಸಂಘಟಿಸಿದೆ. ಯಾರಿಗೆ ಈ ರೀತಿಯ ಅನುಭವವಾಗುವುದಿಲ್ಲ? ಹೇಳಿ.

"ಆಯುಧ ಪೂಜೆ ಪ್ರಯುಕ್ತ ನಮ್ಮ ಕಾರ್ಯಾಲಯಕ್ಕೆ ಬಿಡುವು ಆದ್ದರಿಂದ ನಾಳಿನ ಸಂಚಿಕೆಯು ಪ್ರಕಟವಾಗುವುದಿಲ್ಲ" ಎಂದು ಓದುತ್ತಿದ್ದಂತೆ ಮನಸ್ಸಿಗೆ ತಿವಿದ ಹಾಗೆ ನೋವು, ನಾಳೆ ಪತ್ರಿಕೆಯನ್ನು ಕಳೆದುಕೊಳ್ಳಬೇಕಲ್ಲ ಎಂದು. ದಸರಾ ಹಬ್ಬ ರಜೆಯೊಂದೆ ಅಲ್ಲ, ದೀಪಾವಳಿ ಹಬ್ಬವಾಗಲಿ, ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಕೂಡ ದಿನಪತ್ರಿಕೆಯನ್ನು ಕಳೆದುಕೊಳ್ಳುವ ಪ್ರಸಂಗವು ಬರುತ್ತದೆ. ಆ ಸಮಯದಲ್ಲೂ ಕೂಡ ಹಿಂಸೆ, ದಿನವೂ ಕಾಫಿ ಲೋಟವನ್ನು ಹಿಡಿದು ಪತ್ರಿಕೆಯನ್ನು ಓದುತ್ತಿದ್ದರೆ ಅದರಲ್ಲಿ ಸಿಗುವ ಮಜವೇ ಬೇರೆ. ಕಾಫಿ ಹೀರುತ್ತ ಪತ್ರಿಕೆಯಲ್ಲಿರುವ ಸುದ್ದಿಗಳತ್ತ ಕಣ್ಣಾಡಿಸುತ್ತಿದ್ದರೆ ಬೆಳಗಿನ ಸಮಯ ಕಳೆಯುವುದೆ ಗೊತ್ತಾಗುವುದಿಲ್ಲ. ಅಪರಾಧದ ಸುದ್ದಿಗಳು, ರಾಜಕಾರಣಿಗಳ ಹಗರಣಗಳು, ಸಂಪಾದಕೀಯ, ವಾಚಕರ ಪತ್ರಗಳು, ಅನಿಸಿಕೆ, ಅಭಿಪ್ರಾಯಗಳು ಹೀಗೆ ಹಲವಾರು ಸುದ್ದಿಗಳು ಮನಸ್ಸಿಗೆ ಕಾಫಿಯ ಜೊತೆಗೆ ಅರಗದಿದ್ದರೆ ಆ ದಿನವು ಉದಾಸೀನದಿಂದ ಕಳೆಯಬೇಕಾಗುತ್ತದೆ. ಯಾವುದಕ್ಕೂ ಆಸಕ್ತಿಯೇ ಇರುವುದಿಲ್ಲ. ಆಫೀಸಿಗೆ ತೆರಳಿ ಕೆಲಸ ಶುರುಮಾಡಲು ಕಷ್ಟ, ಒತ್ತಿಕೊಂಡು ಬರುವ ಹಿಂಸೆ ಯಾರ ಬಳಿಯು ಹೇಳಲಾಗುವುದಿಲ್ಲ. ಮುನ್ನೂರ ಅರವತ್ತೈದು ದಿನಗಳಲ್ಲಿ ನಾಲ್ಕು ದಿನದ ಮಟ್ಟಿಗೆ ಪತ್ರಿಕಾಲಯಕ್ಕೆ ಬಿಡುವಿದ್ದರೆ ನನ್ನಂತಹ ವಾಚಕರಿಗೆ ಆ ಮುನ್ನೂರ ಅರವತ್ತೈದು ದಿನವೂ ಪತ್ರಿಕೆಯು ಬರಲಿಲ್ಲವೇನೋ ಎಂಬಂತೆ ಗ್ರಾಸವಾಗುತ್ತದೆ. ನಿಜಕ್ಕೂ ಇಡೀ ವಾಚಕರಿಗು ಈ ಹಿಂಸೆಯು ಅನಿಸಿರಲಿಕ್ಕೂ ಸಾಕು. ಅನಿಸಿಯೇ ಅನಿಸಿರುತ್ತದೆ, ಹೇಳಿಕೊಳ್ಳಲು ಕಷ್ಟ ಅಷ್ಟೆ. ಮಾಸ ಪತ್ರಿಕೆಗಳು ಕೂಡ ಓದಿ ಮುಗಿಸಿದ್ದರು ಕೂಡ ದಿನಪತ್ರಿಕೆ ಓದೆ ತೀರಬೇಕು ಎನ್ನುವ ಹಂಬಲ.

ಕಾರ್ಯಾಲಯವು ಬಿಡುವು ಪಡೆದು ಪುನಃ ಕೆಲಸವನ್ನು ಶುರುಮಾಡಿ ಎಂದಿನಂತೆ ಪತ್ರಿಕೆಯನ್ನು ಪ್ರಕಟಿಸಿದ ದಿನ ಮುಂಜಾನೆಯು ಪತ್ರಿಕೆಯನ್ನು ಹಿಡಿಯುತ್ತಿದ್ದಂತೆ ಸುದ್ದಿಗಳನ್ನು ಓದುವಾಗ ಉಪವಾಸ ಮುಗಿಸಿ ಔತಣಕೂಟದಲ್ಲಿ ಹೊಟ್ಟೆ ಬಿರಿಯುವಷ್ಟು ಊಟ ಮಾಡಿದಂತಹ ಅನುಭವ, ಅಷ್ಟೂ ಸುದ್ದಿಗಳನ್ನು ಪತ್ರಿಕೆಯು ಓದಿಸುತ್ತದೆ. ಸುಮ್ಮನೆ ಪತ್ರಿಕೆಗಳನ್ನು ಹೊರ ತರುವ ಸಿಬ್ಬಂದಿ ವರ್ಗದವರನ್ನು ಹೊಗಳುತ್ತಿಲ್ಲ ಅವರುಗಳು ನೀಡುವ ಮಾಹಿತಿ, ಬಿಸಿ ಬಿಸಿ ಸುದ್ದಿಗಳಿಗೆ ವಾಚಕನು ಮಾರುಹೋಗುತ್ತಾನೆ. ಎಂತಹ ಪರಿಸ್ಥಿತಿ ನನ್ನಂತಹ ವಾಚಕನಿಗೆ ಒದಗಿದೆ ಎಂದರೆ ಅವತ್ತಿನ ದಿನಪತ್ರಿಕೆ ಇಲ್ಲದಿದ್ದರೆ ಜೀವನವೇ ಇಲ್ಲ ಎನ್ನುವ ಮಟ್ಟಿಗೆ ಬಂದು ತಲುಪಿದೆ, ಇಂತಹ ಪರಿಸ್ಥಿತಿಗೆ ಅವಾಚಕರು (ಪತ್ರಿಕೆಯನ್ನು ಓದದೆ ಇರುವವರು) ಮನಸ್ಸಿನಲ್ಲೆ ಆಡಿಕೊಳ್ಳುವುದು ಹೆಚ್ಚು, ಅದು ನಮಗೆಲ್ಲ ತಿಳಿದದ್ದೆ. ಹೇಗೆ ಬೆಳಗಿನ ಕರಿ ಕಷಾಯವನ್ನು ತ್ಯಜಿಸಲು ಆಗುವುದಿಲ್ಲವೋ ಹಾಗೆಯೇ ನೆಚ್ಚಿನ ದಿನಪತ್ರಿಕೆಯನ್ನು ಓದದೆ ಇರಲಾಗುವುದಿಲ್ಲ. ಓದಿಕೊಂಡವನಿಗೆ ಗೊತ್ತು ಜ್ಞಾನ ಮತ್ತು ವಿವೇಕದ ಮರ್ಮ, ನೀವೇನಂತೀರಿ?

Monday, August 8, 2011

ಭಾರತ ಚುನಾವಣಾ ಸುಧಾರಣೆಯ ಅವಶ್ಯಕತೆ

ಭಾರತ ದೇಶದಲ್ಲಿ 64ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸುವ ಸಮಯದಲ್ಲಿ ಪ್ರಜಾಪ್ರಭುತ್ವಕ್ಕೆ ಪ್ರಬಲವಾಗಿ ಪೆಟ್ಟಾಗಿರುವುದರಲ್ಲಿ ಇತ್ತೀಚಿನ ಕೇಂದ್ರ ಹಾಗು ಇತರ ರಾಜ್ಯ ರಾಜಕೀಯ ಬೆಳವಣಿಗೆಗಳಲ್ಲಿ ಮೂಡಿದ ಭಾರಿ ಘಟನಾವಳಿಗಳು ಹಾಗು ಕಾರ್ಯವೈಖರಿಗಳು. ಇಂದು ಇಡೀ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡಲು ಸಕಾರಣವೆಂದರೆ ಅದು ಭ್ರಷ್ಟ ರಾಜಕೀಯ ಮುಖಂಡರುಗಳಿಂದಲೆ. ರಾಜ್ಯದಲ್ಲಿ ನಡೆದ ಗಣಿಹಗರಣ, ಭೂ ಕಬಳಿಕೆ, ಕೇಂದ್ರದಲ್ಲಿ ತುಳುಕುತ್ತಿರುವ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್ ವೆಲ್ತ್ ಹಗರಣಗಳು ಮತ ಚಲಾಯಿಸುವ ಸಾರ್ವಜನಿಕರಿಗೆ ಘಾಸಿಯನ್ನುಂಟುಮಾಡಿದೆ. ಯಥಾ ರಾಜ ತಥಾ ಪ್ರಜಾ ಎಂಬ ನಾಣ್ಣುಡಿಯಂತೆ ರಾಜಕೀಯ ಮುಖಂಡರಿಂದ ಹಿಡಿದು ಕಛೇರಿಯಲ್ಲಿ ಕೆಲಸ ಮಾಡುವ ಗುಮಾಸ್ತನವರೆಗು ಭ್ರಷ್ಟಾಚಾರ ಎದೆ ಸೆಟೆದು ನಿಂತಿದೆ. ಅಣ್ಣಾ ಹಜಾರೆಯವರ ಜನಲೋಕಪಾಲ್ ಮಸೂದೆಯು ಎಷ್ಟರ ಮಟ್ಟಿಗೆ ಕಾರ್ಯಪ್ರವೃತ್ತವಾಗುತ್ತದೋ ಆ ಭಾರತಮಾತೆಯೇ ಬಲ್ಲಳು.

ಭ್ರಷ್ಟಾಚಾರದ ಜೊತೆಗೆ ರಾಜಕಾರಣಿಗಳ ಕ್ರಿಮಿನಲ್ ಮೊಕದ್ದಮೆಗಳು ಕೂಡ ಹೆಚ್ಚುತ್ತಿವೆ, ಆಶ್ಚರ್ಯಕರ ಹಾಗು ಅಪಾಯಕರವೆನಿಸುವಂತೆ ನಮ್ಮ ದೇಶದಲ್ಲಿ 543 ಸಂಸತ್ ಸದಸ್ಯರಲ್ಲಿ 158 ಸದಸ್ಯರು ಕ್ರಿಮಿನಲ್ ಮೊಕದ್ದಮೆಗಳಲ್ಲಿ ದಾಖಲಾಗಿದ್ದಾರೆ. ಕಳವಳಕಾರಿಯಾದ ವಿಷಯವೆಂದರೆ 543ರಲ್ಲಿ 74 ಸದಸ್ಯರು ಕೊಲೆ ಹಾಗು ಅಪಹರಣ ಮೊಕದ್ದಮೆಗಳಲ್ಲಿ ದಾಖಲಾಗಿದ್ದಾರೆ. 500ಕ್ಕೂ ಹೆಚ್ಚು ಮೊಕದ್ದಮೆಗಳಲ್ಲಿ ದಾಖಲಾಗಿರುವ ನಮ್ಮ ಸಂಸತ್ ಸದಸ್ಯರು ಸಕಲ ವರ್ಣಸಮೂಹ ರಾಜಕಾರಣದಿಂದ ಬಂದವರಾಗಿದ್ದಾರೆ. ಚುನಾವಣಾ ಸಂಖ್ಯಾಸಂಗ್ರಹಣದ ಪ್ರಕಾರ 205 ಸಂಸತ್ ಸದಸ್ಯರುಗಳಲ್ಲಿ 12 ಸದಸ್ಯರು ಈಗಿನ ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷದವರಾಗಿದ್ದು ಕ್ರಿಮಿನಲ್ ಮೊಕದ್ದಮೆ ಅರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ. ಬಿ.ಜೆ.ಪಿ ಸರಕಾರವು ಕೂಡ ಇದರಲ್ಲ್ಲಿ ಹೊರತಾಗಿಲ್ಲ 116 ಸದಸ್ಯರಲ್ಲಿ 19 ಶಾಸಕರು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದಾರೆ.ಅಸ್ಪೃಶ್ಯರಿಗೆ ಹಾಗು ಬಡವರಿಗೆ ಶ್ರದ್ಧಾಭಕ್ತಿಯನ್ನು ತೋರುತ್ತೇವೆ ಎಂದು ಹೇಳಿ ಶೇಖಡ 60% ಶಾಸಕರುಗಳು ಸಮಾಜವಾದಿ ಪಾರ್ಟಿ ಹಾಗು ಬಹುಜನ್ ಸಮಾಜ್ ಪಾರ್ಟಿಗಳಿಂದ ಬಂದವರಾಗಿದ್ದು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿದ್ದಾರೆ.

ಗಣನೀಯ ವಿಷಯವೆಂದರೆ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಕೂಡ ಮತ-ಖರೀದಿ ಆರೋಪಗಳು ಕೂಡ ಅತಿರೇಕವಾಗಿ ಸಕಲ ಪಾರ್ಟಿಗಳಿಂದ ನಡೆಯುತ್ತಿವೆ. ಚುನಾವಣಾ ಆಯೋಗವು ಸುಮಾರು 60 ಕೋಟಿ ರೂಪಾಯಿಯನ್ನು ನಗದು ಮುಖಾಂತರ ವಶಪಡಿಸಿಕೊಂಡಿದ್ದು ಹೆಚ್ಚಾಗಿ ತಮಿಳುನಾಡಿನಲ್ಲಿ ಏಪ್ರಿಲ್ ನಲ್ಲಿ ನಡೆದ ಚುನಾವಣೆಗೆ ಸಂಗ್ರಹಿಸಿಟ್ಟ ಹಣವೆಂದು ತಿಳಿದುಬಂದಿದೆ.

ಪಕ್ಷದ ಅಭ್ಯರ್ಥಿಯು ಪ್ರಚಾರಕ್ಕಾಗಿ ಶೇಖಡ 45% ರಿಂದ 55% ವೆಚ್ಚಮಾಡಿ ಹಣವನ್ನು ಪೋಲುಮಾಡುತ್ತಿದ್ದಾರೆ, 2009 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗೆ ಬಹುತೇಕವಾಗಿ 6,753 ಅಭ್ಯರ್ಥಿಗಳು ಶೇಖಡ 45% ರಿಂದ 55% ವೆಚ್ಚಮಿತಿ ಮೀರಿ ಖರ್ಚುಮಾಡಿದ್ದಾರೆ.

ಮೇಲಿನ ಅಂಶಗಳನ್ನು ಗಮನಿಸಿದರೆ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ಗಂಭೀರವಾಗಿ ಕ್ರಮಗೆಟ್ಟಿರುವಂತೆ ಕಾಣುತ್ತಿದೆ. ಮತ ಬಾಂಧವರು ಹಾಗು ಸಾರ್ವಜನಿಕರು ನಂಬುವಂತೆ ನಮ್ಮ ದೇಶಕ್ಕೆ ತುರ್ತಾಗಿ ಚುನಾವಣಾ ಸುಧಾರಣೆಗಳ ಅಗತ್ಯವಿದೆ.

ಭಾರತದ ಅತ್ಯಂತ ಗೌರವಾನ್ವಿತವಾದ ಚುನಾವಣಾ ಸಮಿತಿಯ "ಅಸೋಸಿಯೇಷನ್ ಫಾರ್ ಡೆಮೊಕ್ರ್ಯಾಟಿಕ್ ರಿಫಾರ್ಮ್ಸ್" (www.adrindia.org) ಭಾರತದ ರಾಜಕೀಯವನ್ನು ಸ್ವಚ್ಛಗೊಳಿಸಲು ಹಾಗು ಭ್ರಷ್ಟಾಚಾರವನ್ನು ತೊಲಗಿಸಲು ಕೆಳಗಿನ ಅಂಶಗಳನ್ನು ಪುಷ್ಟೀಕರಿಸುತ್ತವೆ.
  • ಅಭ್ಯರ್ಥಿಯು ಗಂಭೀರವಾದಂತಹ ಮುಖ್ಯವಾಗಿ ಕೊಲೆ, ಅತ್ಯಾಚಾರ, ಅಪಹರಣ, ಸುಲಿಗೆ ಇತ್ಯಾದಿ ಅಪರಾಧಗಳಲ್ಲಿ ತೊಡಗಿದ್ದರೆ ಚುನಾವಣೆಗಳಿಂದ ನಿಷೇಧಿಸುವುದು ಸೂಕ್ತ.ಅಭ್ಯರ್ಥಿಯು ಅಪರಾಧಿ ಎಂದು ಸಾಬೀತಾದ ಪಕ್ಷದಲ್ಲಿ ಕಾನೂನು ರೀತ್ಯಾ ಎರಡು ವರ್ಷ ಕಠಿಣ ಶಿಕ್ಷೆಗೆ ಒಳಗಾಗಬೇಕು ಹಾಗು ಚುನಾವಣೆಯನ್ನು ಸ್ಪರ್ಧಿಸಲು ಅನುವುಮಾಡಿಕೊಡಬಾರದು.
  • "ಯಾವುದೇ ಅಭ್ಯರ್ಥಿಗೆ ಮತದಾನ ಚಲಾಯಿಸುವುದಿಲ್ಲ" ಎಂಬ ಆಯ್ಕೆಯನ್ನು ಮತದಾರರಿಗೆ ಅನುವುಮಾಡಿಕೊಡಬೇಕು.
  • ಅಭ್ಯರ್ಥಿಗಳು ಚುನಾವಣೆಯಲ್ಲಿ ಪೋಲು ಮಾಡುವ ವಿಪರೀತ ಹಣದ ಬಳಕೆಯ ವಿರುದ್ಧ ಕಾನೂನು ರಚನೆಯಾಗಬೇಕು.
  • ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ತಮ್ಮ ವೆಚ್ಚದ ಮಿತಿಯು ಪ್ರಾಮಾಣಿಕವಾಗಿರುವುದಿಲ್ಲ, ಹಾಗಾಗಿ ಸಾರ್ವಜನಿಕರ ಪರಿಶೀಲನೆಗಾಗಿ ಪರಿಶೀಲಿಸಬಹುದಾದಂತಹ ಖಾತೆಗಳನ್ನು ಪಕ್ಷವು ಕೃತ್ರಿಮವಿಲ್ಲದೆ ಪ್ರಕಟಿಸಬೇಕು ಹಾಗು ಸದಾ ದೊರೆಯುವಂತಿರಬೇಕು.
  • ರಾಜಕೀಯ ಪಕ್ಷಗಳು ಜಾತಿ, ಧರ್ಮದ ಆಧಾರದ ಮೇಲೆ ಮತಗಳನ್ನು ಪಡೆಯಲು ನಿಲ್ಲಿಸಬೇಕು. ಒಡಕುಂಟು ಮಾಡುವಂತಹ ಪ್ರಚಾರವನ್ನು ನಿರ್ಬಂಧಿಸಬೇಕು.
ಚುನಾವಣೆ ಸುಧಾರಣೆಯ ಆಸೆ ಹೊಸದಲ್ಲ.1990 ರಿಂದ ಕನಿಷ್ಠ ಏಳು ಬಾರಿಯಾದರು ಸರಕಾರದ ಆಯೋಗಗಳು ಸುಧಾರಣೆ ಹೊಂದಲು ಪ್ರಯತ್ನಿಸುತ್ತಿದೆ, ಭಾರತದ ಚುನಾವಣೆ ಆಯೋಗ 1998ರಿಂದ ಅಭ್ಯರ್ಥಿಗಳ ವಿರುದ್ಧ ಬಾಕಿ ಉಳಿದಿರುವ ಅಪರಾಧ ಪ್ರಕರಣಗಳ ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಹೇಳುತ್ತ ಬಂದಿದೆ ಆದರೆ ಈ ಸುಧಾರಣೆಗಳು ಬಗ್ಗೆ ಅಗಾಧ ಒಮ್ಮತವಿದ್ದರೆ, ಏಕೆ ಸರ್ಕಾರಗಳು ಎರಡು ದಶಕಗಳ ಕಾಲ ಮೇಲೆ ಕುಳಿತು ಸಮಯವನ್ನು ದೂಡುತ್ತಿವೆ? ಸ್ವಾರ್ಥ ರಾಜಕಾರಣಿಗಳನ್ನು ಕೇಳಬೇಕಷ್ಟೆ.