Saturday, March 20, 2010

ಯಾರು...? ನಾನೇ...?

ರಣ ಬಿಸಿಲಿನ ಅಪರಾಹ್ನ 12 ಘಂಟೆ 100 ಅಡಿ ಅಗಲದ ಸ್ವಚ್ಛಂದವಾದ ನಾಲ್ಕು ರಸ್ತೆಗಳು ಸಂಗಮವಾಗುತ್ತಿತ್ತು, ಸಂಚಾರ
ಅಸ್ತವ್ಯಸ್ತವಿಲ್ಲದೆ ಸಂಚಾರದಟ್ಟಣೆಯು ಇಲ್ಲದೆ ವಾಹನಗಳು ಸಾಗುತ್ತಿತ್ತು. ನಾಗರೀಕರು ನೋಡಿಕೊಂಡು ರಸ್ತೆಗಳನ್ನು ದಾಟುತ್ತಿದ್ದರು.
ಜಂಕ್ಷನ್ ಸುತ್ತಲು ಪ್ರದರ್ಶನ ಮಳಿಗೆ, ಹೋಟೆಲ್ ಗಳು, ಅಂಗಡಿ ಮುಗ್ಗಟ್ಟುಗಳು ತಮ್ಮ ಎಂದಿನ ಕಾರ್ಯಗಳಲ್ಲಿ ಮಗ್ನಗೊಂಡಿದ್ದವು.

ಪ್ರದರ್ಶನ ಮಳಿಗೆಯ ಮೇಲ್ಛಾವಣಿಯ ಕೆಳಗೆ ಕೂದಲನ್ನು ಕೆದರಿಕೊಂಡಿರುವ ಏಳು ವರುಷದ ಹುಡುಗಿ ತನ್ನ ಎರಡು ವರುಷದ ತಮ್ಮನ ತಲೆಯಿಂದ ಹೇನನ್ನು ಹೆಕ್ಕುತ್ತ ಜೊತೆಗೆ ಭಿಕ್ಷೆಬೇಡುತ್ತ ಕುಳಿತಿದ್ದಳು. ಇಬ್ಬರ ಬಟ್ಟೆಯು ಹೇಳ ಹೆಸರಿಲ್ಲದಂತೆ ಹರಿದಿತ್ತು , ಆ ಗಂಡು ಮಗುವು ನಡೆಹಾದಿಯ ಮೂಲೆಯಲ್ಲಿರುವ ಧೂಳಿನಲ್ಲಿ ಬೆರಳಾಡಿಸುತ್ತ ಕಾಲ ಕಳೆಯುತ್ತಿತ್ತು. ಅಪರಾಹ್ನವಾದ್ದರಿಂದ ಹೊಟ್ಟೆ ಚುರುಗುಟ್ಟಿತೇನೊ ಅಳಲು ಪ್ರಾರಂಭಿಸಿತು, ಆ ಬಡ ಹುಡುಗಿಯು ತನ್ನ ಕೂದಲನ್ನು ಸರಿ ಮಾಡಿಕೊಳ್ಳುತ್ತ ಸಂತೈಸಲು ಹೆಣಗಾಡುತ್ತಿದ್ದಳು.

ಆಚೆ ಬದಿಯಿಂದ ಸಿರಿವಂತನಾದ ವ್ಯಾಪಾರಿ ರಸ್ತೆದಾಟಿದನ್ನು ಕಂಡು ಅವನತ್ತ ಭಿಕ್ಷೆ ಅರಸುತ್ತ ಅಪೇಕ್ಷೆಪಡುತ್ತ ಮಗುವನ್ನು ತನ್ನ ಕಂಕುಳಲ್ಲಿ ಕುಳ್ಳರಿಸಿ ಅವನತ್ತ ಹೆಜ್ಜೆ ಹಾಕಿದಳು, ವ್ಯಾಪಾರಿಯ ಹಿಂದೆ ಮುಂದೆ ಅವನ ಗಮನ ಹರಿಸಲು ಪ್ರಯತ್ನಿಸಿದಳಾದರು ಅವನು ಗಮನಿಸಿಯು ಗಮನಿಸದಂತೆ ದಾಪುಗಾಲು ಹಾಕುತ್ತ ಹೋದನು, ಪ್ರಯತ್ನವು ಫಲಕಾರಿಯಾಗಲಿಲ್ಲ. ನಿರಾಸೆಯಾಗಿ ಮೇಲ್ಛಾವಣಿಯ ಕೆಳಗೆ ಮಗುವನ್ನು ಸಂತೈಸುತ್ತ ಕುಳಿತಲು.

ಧಾವಣಿಯಲ್ಲಿ ಕಟ್ಟಿಕೊಂಡಿದ್ದ ತಂಗಳು ರೊಟ್ಟಿಯನ್ನು ಚಿಕ್ಕ ಚಿಕ್ಕ ತುಂಡನ್ನು ಮಾಡಿ ಮಗುವಿಗೆ ತಿನ್ನಿಸಿಕೊಂಡು ಹೆಜ್ಜೆ ಹಾಕುತ್ತ ಕಣ್ಮರೆಯಾದಳು.

ವ್ಯಾಪಾರಿಯು ತನ್ನ ಕೆಲಸ ಮುಗಿಸುಕೊಂಡು ರಾತ್ರಿ ವೇಳೆ ತನ್ನ ಬಂಗಲೆಗೆ ಮರಳಿ, ಸುಧಾರಿಸಿಕೊಂಡು ಊಟ್ಟಕ್ಕೆ ಕುಳಿತುಕೊಂಡನು, ಊಟದ ತುತ್ತು ಬಾಯಿಗೆ ಹಾಕಿಕೊಳ್ಳುವಷ್ಟರಲ್ಲಿ ಆ ಪುಟ್ಟ ಹುಡುಗಿಯ ನೆನಪಾಯಿತು. ಥಟ್ಟನೆ ಆ ಹುಡುಗಿಯ ಮೇಲೆ ಕನಿಕರ ಹುಟ್ಟಿ ಪರಮಾತ್ಮನ ನೆನಪಾಗಿ ಅವನ ಮೇಲೆ ಕೋಪಗೊಂಡನು. " ಆ ಹುಡುಗಿಗೆ ಯಾಕೆ ಇಂತಹ ಸ್ಠಿತಿ ಒದಗಿಸಿದೆ, ಯಾಕಾಗಿ ಆ ಹೀನಾಯ ಸ್ಥಿತಿಗೆ ಆ ಪುಟ್ಟ ಮಕ್ಕಳನ್ನು ದೂಡಿದೆ, ಕಿಂಚಿತ್ತಾದರೂ ಆ ಪುಟ್ಟ ಮಕ್ಕಳಿಗೆ ಸಹಾಯ ಮಾಡಬಾರದೆ? " ಎಂದು ಕೇಳಿಕೊಂಡನು.

"ನಾನು ನನ್ನ ಕರ್ತವ್ಯ ಮಾಡಿರುವೆ, ನಿನ್ನನ್ನು ಸೃಷ್ಟಿಸಿರುವೆ ತಾನೆ? " ಎಂದು ತನ್ನ ಅಂತಃ ಸಾಕ್ಷಿಯು ನುಡಿಯಿತು.