Friday, July 20, 2012

ಬಿಜೆಪಿ ಸರಕಾರದ ಆಡಳಿತ - ಒಡೆದ ಮನೆಯಲ್ಲಿ ಸ್ವಾರ್ಥದ ರಾಜಕಾರಣ.


ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು  ನಾಲ್ಕು ವರ್ಷಗಳು ಪೂರೈಸಿ,ಐದನೆ ವರ್ಷಕ್ಕೆ ಕಾಲಿಟ್ಟಿದೆ. ರಾಜ್ಯ ರಾಜಕಾರಣದಲ್ಲಿ ಇನ್ನೊಂದು ಮಹಾ ಬಿರುಗಾಳಿ ಬೀಸುವ ಸೂಚನೆಗಳು ಕಾಣಿಸಿಕೊಳ್ಳುತ್ತಿದೆ. ಬಿಜೆಪಿಯ ಆಕಾಶದಲ್ಲಿ ಮತ್ತೆ ಮೋಡಕವಿದಿದೆ.ಈ ಬಾರಿಯ ಸುಂಟರಗಾಳಿ ರಾಜ್ಯ ಸರಕಾರದ ಪಾಲಿಗೆ ಸುನಾಮಿಯಾಗಿ ಪರಿವರ್ತನೆಯಾಗುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ. ಬಿಜೆಪಿಯೊಳಗಿನ ಭಿನ್ನಮತ,  ಪಕ್ಷದೊಳಗಿನ ಆಂತರಿಕ ಕಚ್ಚಾಟ, ನಾಯಕತ್ವಕ್ಕಾಗಿ ನಡೆಯುತ್ತಿರುವ ಗುದ್ದಾಟ, ಭಿನ್ನಮತ, ರೇಸಾರ್ಟ್ ರಾಜಕೀಯ ಶಮನವಾಗಿಲ್ಲ.ನಾಯಕತ್ವ ಬದಲಾವಣೆಗಾಗಿ ಯಡಿಯೂರಪ್ಪನವರ ಸಮರ ಇನ್ನಷ್ಟು ತೀವ್ರವಾಗಿದೆ.ಮುಖ್ಯಮಂತ್ರಿ ಸದಾನಂದ ಗೌಡರ ತಲೆದಂಡ ಕೇಳುತ್ತಲೇ ಬಿಜೆಪಿಯೊಳಗೆ ಸಮರ ಸಾರಿರುವ ಯಡಿಯೂರಪ್ಪ ಹಾಗೂ ಅವರ ಬಣ,ಮತ್ತೆ ಹೋರಾಟವನ್ನು ತೀವ್ರಗೊಳಿಸಲು ವೇದಿಕೆ ಸಿದ್ಧಪಡಿಸಿಕೊಂಡಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ತಮ್ಮ ಹಾಗೂ ತಮ್ಮ ಆಪ್ತರ ನಿವಾಸ ಕಚೇರಿ,ಸಂಸ್ಥೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ಎಫ್‌ಐಆರ್ ದಾಖಲಿಸಿದ್ದರೂ, ಹೋರಾಟವನ್ನು ಸಡಿಲಗೊಳಿಸದ ಯಡಿಯೂರಪ್ಪ, ತಮ್ಮ ಆಪ್ತರಾಗಿರುವ ಜಗದೀಶ್ ಶೆಟ್ಟರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಸಮರಕ್ಕಿಳಿದಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ವರ್ಷ ಹೊರತುಪಡಿಸಿದರೆ ಉಳಿದ ಮೂರು ವರ್ಷಗಳಲ್ಲಿ ಆಂತರಿಕ ಬಿಕ್ಕಟ್ಟು, ಪರಸ್ಪರ ಕಾಲೆಳೆಯುವುದು, ಸರ್ಕಾರ ಉರುಳಿಸುವ ಉಳಿಸಿ ಕೊಳ್ಳುವ ಹೋರಾಟ, ಭ್ರಷ್ಟಾಚಾರ, ಹಗರಣಗಳ ಸರಮಾಲೆಯೇ ಪ್ರಮುಖವಾಗಿ ಆಡಳಿತ ಮತ್ತು ಅಭಿವೃದ್ಧಿ ಎಂಬುದು ಮಾತುಗಳಲ್ಲೇ ಉಳಿಯಿತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಏಕೆಂದರೆ, ಸರ್ಕಾರದ ನೇತೃತ್ವ ವಹಿಸಿದ್ದ ಯಡಿಯೂರಪ್ಪ ಅವರು ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರಲ್ಲದೆ, ಗುಜರಾತ್ ಮಾದರಿ ಆಡಳಿತ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ನಾನಾ ಕಸರತ್ತುಗಳ ಮೂಲಕ ಸರ್ಕಾರ ಉಳಿಸಿಕೊಂಡಿದ್ದೇ ದೊಡ್ಡ ಸಾಧನೆ ಯಾದರೆ, ನಂತರವೂ ಹಗರಣಗಳ ಸರಮಾಲೆಯೇ ಮುಂದುವರಿಯಿತು.

ಮೊದಲನೆ ವರ್ಷ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನರು ಇಟ್ಟಿದ್ದ ನಿರೀಕ್ಷೆಗಳನ್ನು ಉಳಿಸಿ ಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡಿದ ವರ್ಷವಿದು. ಸಾಲು ಸಾಲಾಗಿ ಬಂದ ಚುನಾವಣೆಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದ್ದು ನಿಜವಾದರೂ, ಮುಂದಿನ ದಿನಗಳಲ್ಲಿ ಸರ್ಕಾರದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿಸಿತ್ತು. ಹೀಗಾಗಿ ಮೊದಲ ವರ್ಷ ಪೂರೈಸುತ್ತಿದ್ದಂತೆ ಸರ್ಕಾರ ವಿಕಾಸ ಸಂಕಲ್ಪ ಉತ್ಸವ ಆಯೋಜಿಸಿ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಕಾರ್ಯಕ್ರಮಗಳನ್ನು ರೂಪಿಸಿತ್ತು. ಎರಡನೇ ವರ್ಷದಲ್ಲಿ ಸರಕಾರಕ್ಕೆ ಸಂಕಷ್ಟಗಳು ಎದುರಾದವು, 2009ರ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ ಉಂಟಾಗಿ ಲಕ್ಷಾಂತರ ಜನರ ಬದುಕು ನೀರಿನಲ್ಲಿ ಮುಳುಗುತ್ತಿದ್ದಾಗ ಆಡಳಿತ ನಡೆಸುವವರು ಚಿಂತನಾ ಬೈಠಕ್‌ನಲ್ಲಿ ತಲ್ಲೀನರಾಗಿದ್ದರು. ನೆರೆ ಸಂತ್ರಸ್ತರು ಬದುಕಿದರೆ ಸಾಕು ಎನ್ನುವ ಸ್ಥಿತಿಯಲ್ಲಿರುವಾಗ ಗಣಿ ಲಾಬಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಿತು. ಮೂರನೇ ಅಧಿಕಾರದ ವರುಷ ಹಗರಣ, ಡಿನೋಟಿಫಿಕೇಶನ್, ಅಕ್ರಮ ಗಣಿಗಾರಿಕೆಯ ವರ್ಷವಾಯಿತೆ ಹೊರತು ಸಾಧನೆಯ ಮೂರು ವರ್ಷ ಆಗಲೇ ಇಲ್ಲ. ಭೂ ಹಗರಣಗಳು ಒಂದೊಂದಾಗಿ ಹೊರಬರಲಾರಂಭಿಸಿದವು. ಇದು ಎಷ್ಟರ ಮಟ್ಟಿಗೆ ತೀವ್ರಗೊಂಡಿತ್ತು ಎಂದರೆ, ಆಡಳಿತದಲ್ಲಿರುವವರ ಭ್ರಷ್ಟಾಚಾರ ವಿರೋಧಿಸಿ ಒಂದು ಗುಂಪು ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯಿತು. ನಾಲ್ಕನೇ ವರ್ಷದಲ್ಲಿ ಕೆಲಸ ಆಗಿದೆ ಎನ್ನುವುದಕ್ಕಿಂತ ಸರ್ಕಾರ ಇನ್ನೂ ಉಳಿದು ಕೊಂಡಿದೆ ಎಂಬುದೊಂದೇ ಸಾಧನೆ. ರು.1 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಿದ ಒಂದು ಹೆಗ್ಗಳಿಕೆ ಬಿಟ್ಟರೆ ಹಿಂದಿನ ವರ್ಷದ ಬಜೆಟ್ ಅನುಷ್ಠಾನ, ಯೋಜನೆಗಳ ಜಾರಿ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಮುಖ್ಯಮಂತ್ರಿ ಹುದ್ದೆಗಾಗಿ ಕಳೆದ ಡಿಸೆಂಬರ್ ತಿಂಗಳಲ್ಲಿ ಆರಂಭವಾದ ಯಡಿಯೂರಪ್ಪ ಅವರ ಹೋರಾಟ ಇದುವರೆಗೂ ಸರ್ಕಾರ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಲೇ ಇಲ್ಲ. ಎರಡು ಗುಂಪುಗಳ ನಡುವಿನ ಗುಂಪುಗಾರಿಕೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ.  ಒಂದೆಡೆ ಜನರು ಮಳೆಯಿಲ್ಲ ಎಂದು ಕೂಗೆಬ್ಬಿಸುತ್ತಿದ್ದರೆ ಇನ್ನೊಂದೆಡೆ ಸರಕಾರದೊಳಗೆ ಯಾರು ಮುಖ್ಯ ಮಂತ್ರಿಯಾಗಬೇಕು ಎನ್ನುವ ಕುರಿತಂತೆ ಭಾರೀ ಚರ್ಚೆಯೆದ್ದಿದೆ. ಅಳಿದುಳಿದ ಒಂದು ವರ್ಷವನ್ನಾದರೂ ರಾಜ್ಯ ಬಿಜೆಪಿ ಸರಕಾರ ಜನರಿಗಾಗಿ ಮೀಸಲಿಡುತ್ತದೆಯೋ ಎಂದು ಯೋಚಿಸಿದರೆ, ಅಂತಹ ಯಾವ ಆಸೆಯನ್ನೂ ಇರಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು. ಈವರೆಗೆ ಮುಖ್ಯಮಂತ್ರಿಯಾಗುವ ಆಸೆ ಯಡಿಯೂರಪ್ಪನವರದು ಮಾತ್ರವಾಗಿತ್ತು. ಆದರೆ ಇದೀಗ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿರುವವರ ಸಂಖ್ಯೆ ಒಮ್ಮಿಂದೊಮ್ಮೆಗೆ ಹೆಚ್ಚಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾದರೆ, ಸಂಪುಟ ವಿಸ್ತರಣೆ, ಪ್ರಮಾಣವಚನ ಸ್ವೀಕಾರ ಇತ್ಯಾದಿ ಇತ್ಯಾದಿಗಳಿಗಾಗಿ ಆರು ತಿಂಗಳು ವ್ಯಯವಾಗುತ್ತದೆ. ಈ ನಾಲ್ಕೈದು ವರ್ಷಗಳಲ್ಲಿ ಏನನ್ನೂ ಮಾಡಲು ಸಾಧ್ಯವಾಗದವರು ಇನ್ನುಳಿದ ಒಂದು ವರ್ಷದಲ್ಲಿ ಏನನ್ನು ಸಾಧಿಸಿಯಾರು? ಆದರೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆಯೆಂದರೆ ಅದರ ಉದ್ದೇಶ, ಜನರ ಸೇವೆಯಲ್ಲ. ಇರುವಷ್ಟು ದಿನ ನಾಡನ್ನು ದೋಚುವುದಷ್ಟೇ ಅವರ ಗುರಿ.

ಈ ಎಲ್ಲ ಕಾರಣಗಳಿಂದ ಬೇಸತ್ತ ವರಿಷ್ಠರು ಕರ್ನಾಟಕದ ಕಡೆಗೆ ತಲೆ ಹಾಕುವುದಕ್ಕೂ ಹೆದರುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ಭಿನ್ನಮತವನ್ನು ತಣಿಸುವ ಒಂದೇ ಒಂದು ಉಪಾಯವೆಂದರೆ ಸರಕಾರವನ್ನು ತಕ್ಷಣವೇ ವಿಸರ್ಜಿಸುವುದು. ತೇಪೆ ಹಚ್ಚುವುದರಿಂದ ಬಿಜೆಪಿ ಸರಕಾರದ ಯಾವ ಸಮಸ್ಯೆಯೂ ಇತ್ಯರ್ಥವಾಗುವುದಿಲ್ಲ. ಸರಕಾರ ಮುಂದುವರಿದಷ್ಟು ಬಿಕ್ಕಟ್ಟು ಜಾಸ್ತಿಯಾಗುತ್ತಾ ಹೋಗುತ್ತದೆ. ಅದರ ಬದಲು ಯಾರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸುವುದು ಎನ್ನುವುದರ ಕಡೆಗೆ ಬಿಜೆಪಿ ವರಿಷ್ಠರು ತಲೆ ಕೊಟ್ಟರೆ ಪಕ್ಷಕ್ಕೂ ನಾಡಿಗೂ ಅದರಿಂದ ಒಳಿತಿದೆ. ಮುಖ್ಯಮಂತ್ರಿ ಸ್ಥಾನ ಬದಲಿಸಿದರೂ, ಬದಲಿಸದಿದ್ದರೂ ಅದರ ಪರಿಣಾಮ ಒಂದೇ ಎಂದ ಮೇಲೆ ಸರಕಾರ ವಿಸರ್ಜಿಸಿ ಮಧ್ಯಾಂತರ ಚುನಾವಣೆಗೆ ಅಣಿಯಾಗುವುದೇ ಜಾಣತನ. ಮೊದಲು ಸರಿಯಾಗಬೇಕಾದವರು ದಿಲ್ಲಿಯ ವರಿಷ್ಠರು.ಬಳಿಕವಷ್ಟೇ ರಾಜ್ಯವನ್ನು ಅವರು ಸರಿಪಡಿಸಬಹುದು.ಒಟ್ಟಿನಲ್ಲಿ, ಸದ್ಯದ ಸ್ಥಿತಿಯಲ್ಲಿ ಸರಕಾರ ಮುಂದುವರಿಯುವುದಕ್ಕಿಂತ ವಿಸರ್ಜನೆ ಬಿಜೆಪಿಯ ಆರೋಗ್ಯಕ್ಕೆ ಹೆಚ್ಚು ಒಳಿತು. ಕನಿಷ್ಠ ಇನ್ನು ಹತ್ತು ವರ್ಷಗಳ ಕಾಲ ಅಧಿಕಾರವಿಲ್ಲದೆ ವಿರೋಧ ಪಕ್ಷದಲ್ಲಿ ಕುಳಿತರೆ ಮಾತ್ರ ಬಿಜೆಪಿ ಮತ್ತೆ ಚಿಗುರಿಕೊಳ್ಳಬಹುದು. ಕಳೆದುಕೊಂಡ ತನ್ನ ಶಕ್ತಿಯನ್ನು ಮರಳಿ ಪಡೆಯಬಹುದು. ಇಲ್ಲವಾದರೆ, ಅದು ಕೊಳೆತು ರಾಜ್ಯದಲ್ಲಿ ಸರ್ವನಾಶವಾಗಲಿದೆ.

ನನ್ನ ಮಗಳು ನಾಲ್ಕು ವರ್ಷದವಳಾದರು ಇಂದಿನ ಸರ್ಕಾರದ ಅವಸ್ಥೆಯನ್ನು ಕಂಡು ಬಿಜೆಪಿಯ ಕಮಲದ ದಳಗಳನ್ನು ಹಲವು ರಾಜಕೀಯ ದುರೀಣರ ವಿವಿಧ ನಿಲುವುಗಳನ್ನು ಕಂಡು ಕಾಕತಾಳೀಯವೆಂಬಂತೆ ದಳಗಳಿಗೆ ವಿಭಿನ್ನ ಬಣ್ಣಗಳನ್ನು ರಚಿಸಿ ನಮ್ಮೆಲ್ಲರ ಗಮನ ಸೆಳೆದಳು.

0 Comments:

Post a Comment

Subscribe to Post Comments [Atom]

<< Home