ಚಿಂತನೆ - ನಮ್ಮ ಮನಸ್ಸು ಯಾಕೆ ಹೀಗೆ....?

ಶಿವರಾತ್ರಿ ಕಳೆದು ಮೊದಲ ಸೋಮವಾರದಂದು ಬೇಸಿಗೆಯ ಸಂಜೆ 6.45 ರ ಸಮಯ ಅಂಕಣ 1ರ ಹಂಪಿನಗರ ಬಸ್ಸಿಗಾಗಿ ಜನ ಜಾತ್ರೆಯೆ ಕಾಣುತ್ತಿತ್ತು, ಮೆಜೆಸ್ಟಿಕ್ ಇಂದ ಹಂಪಿನಗರವನ್ನು ತಲುಪುವುದಕ್ಕೆ ನಮ್ಮ ಬೆ.ಮ.ಸಾ.ಸಂ. (ಬಿ.ಎಂ.ಟಿ.ಸಿ) ಬಸ್ಸುಗಳು ಅಂದಾಜು 45 ನಿಮಿಷ ಅಥವಾ ಹೆಚ್ಚೆಂದರೆ 1ಘಂಟೆತೆಗೆದುಕೊಳ್ಳಬಹುದು, ಅದು ಟ್ರಾಫಿಕ್ ಅಷ್ಟಾಗಿ ಇಲ್ಲದ ಸಮಯದಲ್ಲಿ. ಬಸ್ಸಿನ ಮಾರ್ಗ ಸಂಖ್ಯೆ : 87, ಅದರ ಆವರ್ತನ ಪ್ರತಿ ಅರ್ಧ ಘಂಟೆಗೆ ಮೀಸಲಿದ್ದರು ಆ ವಿಷಯಗಳನ್ನು ಗಾಳಿಗೆ ತೂರುವುದೆ ಸೂಕ್ತ, ಯಾಕೆಂದರೆ ಮೇಲೆ ಹೇಳಿದ ನೆಪಗಳು ಇಲ್ಲಿಯು ಹೊಂದಿಸಿಕೊಳ್ಳಬಹುದು. 6.50ರ ಆಸುಪಾಸಿನಲ್ಲಿ ಬಂದ ಆ ಮಾರ್ಗದ ಬಸ್ಸು ಸಕಲ ಜನರನ್ನು ಸೀಟು ಹಿಡಿಯುವುದಕ್ಕಾಗಿ ಜಾಗೃತಗೊಳಿಸಿತು. ಹೆಚ್ಚೆಂದರೆ 1ಘಂಟೆ ಪ್ರಯಾಣಕ್ಕೆ ಸೀಟು ಹಿಡಿಯುವುದಕ್ಕಾಗಿ ಜನರ ರಾದ್ಧಾಂತ ನೋಡಬೇಕು ತಿಳಿವಿರದ ಜನರೊ ಅಥವ ಪೈಪೋಟಿಯೊ ಎಂದು ಲೆಕ್ಕಹಾಕುತ್ತಿರುವಾಗಲೆ ಬಸ್ಸಿನಿಂದ ಕೊನೆಯ ಇಬ್ಬರು ಮಧ್ಯ ವಯಸ್ಕರು ಇಳಿಯುವ ಹೊತ್ತಿನಲ್ಲಿ ಹತ್ತಲು ಅನುವುಮಾಡಿಕೊಂಡ ಅಂಕಣ 1ರ ಜನರು ಬಸ್ಸಿಗೆ ನುಗ್ಗಲು ಆ ಇಬ್ಬರು ಮಧ್ಯ ವಯಸ್ಕರು ಮಧ್ಯಕ್ಕೆ ಸಿಲುಕಿ ಅಡ್ಡಗಟ್ಟಿ ಅವರು ಬಿಡಿಸಿಕೊಳ್ಳಲಾಗದೆ ಅಲ್ಲೆ ಎಡವಿ, ಕೂತು , ಎದ್ದು ನೂಕುನುಗ್ಗಲಿನಿಂದ ಆಚೆ ಬರುವ ಹೊತ್ತಿಗೆ ಅವರ ಬಾಯಿಂದ ಬೈಗುಳದ ಮಂತ್ರವು ಹೊರಡತ್ತಿತ್ತು. ಜನರು ತಮಗಲ್ಲ ಎಂದು ಸೀಟು ಹಿಡಿಯಲು ಹಾತೊರೆಯುತ್ತಿದ್ದರು. ವಯಸ್ಸಾದವರು ಹಾಗು ಸ್ವಲ್ಪ ವಿವೇಚನ ವ್ಯಕ್ತಿಗಳು ತಾಳ್ಮೆಯಿಂದಲೆ ಹತ್ತಲು ಕಾಯುತ್ತಿದ್ದರು. ಇದರ ಮಧ್ಯೆ ಸೀಟು ಸಿಕ್ಕಿದ ಜನರೆಲ್ಲ "ಹಾ, ನಾ ಗೆದ್ದೆ" ಎಂದು ತಮ್ಮ ಜಯಕಾರದ ಮುಖಾರವಿಂದವನ್ನು ಬಸ್ಸಿನ ಕಿಟಕಿಗೆ ಆನಿಸಿ ಉತ್ಪ್ರೇಕ್ಷಿಸುತ್ತಿದ್ದರು.ನಾನು ವಯಸ್ಸಾದವರ ಜೊತೆ ಹತ್ತೋಣವೆಂದು ಕೊಳ್ಳುವಷ್ಟರಲ್ಲಿ ಇಬ್ಬರು ದೃಷ್ಟಿಹೀನ ಯುವಕರು ದಾರಿ ಅರಸುತ್ತ ನಮ್ಮ ಜೊತೆ ನಿಂತು ಹತ್ತಲು ಅನುವುಮಾಡಿಕೊಂಡರು. ಅವರಿಗೆ ದಾರಿ ಮಾಡಿಕೊಟ್ಟು ಇಬ್ಬರನ್ನು ಹತ್ತಿಸಿ ಒಳಗೆ ಹೋದೆವು. ಜನರು ನೋಡಿಯು ನೋಡದಂತೆ "ಈ ಸೀಟು ನನ್ನದು" ಎಂದು ಕೂತಲ್ಲಿಯೆ ಅಂಟಿಕೊಂಡರು. ಅಂಗವಿಕಲ ಸೀಟನ್ನು ಬಿಟ್ಟುಕೊಡಲು ಹಿಂಜರಿಕೆ ಈ ನಮ್ಮ ಮನುಜರಿಗೆ. ಒಬ್ಬನು ಸೀಟನ್ನು ಬಿಟ್ಟುಕೊಡಲಿಲ್ಲ, ವಿವೇಚನೆ ಇಲ್ಲದ ಜನರು ಎಂದು ಸುಮ್ಮನೆ ನಿಂತೆ ಇದ್ದೆ. ಸಹಾಯವನ್ನು ಮಾಡುವ ಸಣ್ಣ ಪರಿಜ್ಞಾನವನ್ನು ಹೊಂದಿಲ್ಲವೆ ಎಂದು ಆಲೋಚಿಸುವಷ್ಟರಲ್ಲಿ ಬಸ್ಸು ಮಾಗಡಿ ರಸ್ತೆ ತಲುಪಿತು. ಎರಡು ಸೀಟು ಖಾಲಿಯಾಯಿತಲ್ಲ ಇನ್ನು ಆ ಯುವಕರಿಗೆ ಹೇಳಿ ಕುಳಿಸುವಷ್ಟರಲ್ಲಿ ಆ ಸೀಟುಗಳು ವಿವೇಚನೆ ಇಲ್ಲದ ಯುವಕರು ಆಕ್ರಮಿಸಿ ಎಲ್ಲೊ ನೋಡುತ್ತಿದ್ದರು. ಏನು ಅರಿಯದ ಆ ದೃಷ್ಟಿಹೀನ ಯುವಕರು ಹಾಗೆಯೆ ನಿಂತಿದ್ದರು. ಯಾಕೆ ನಾವು ವಿವೇಚನೆ ಬಿಟ್ಟು ಸ್ವಾರ್ಥಕ್ಕೆ ಜೋತು ಬಿದ್ದು ಇನ್ನೊಬ್ಬರಿಗೆ ಸಂಕಟವನ್ನು ಎಸಗುತ್ತೇವೆ ಎಂಬುದೊಂದು ಯಕ್ಷಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಈಗಲ್ಲು ಕಾಡುತ್ತಿದೆ. 7.30ರ ಸುಮಾರು ಪೈಪ್ ಲೈನ್ ರಸ್ತೆಯ ಸ್ಟಾಪಿನಲ್ಲಿ ಆ ಇಬ್ಬರು ಯುವಕರು ನಗುಮೊಗದಿಂದ ಇಳಿದುಕೊಂಡರು. ವಿಪರ್ಯಾಸವೆಂದರೆ ಆ ಸ್ಟಾಪ್ ಕಳೆದ ಮೇಲೆ ಮುಕ್ಕಾಲು ಬಸ್ಸು ಖಾಲಿಯಾಗಿತ್ತು. ಮೇಲ್ಕಂಡ ಆಗಾಗ ಅನುಭವವಾಗುವ ಆ ಅಂಕಣ 1ರಲ್ಲಿ ದಿನವು ಸರ್ವೆ ಸಾಮಾನ್ಯ. ಮುಕ್ಕಾಲು ಘಂಟೆಯ ಪ್ರಯಾಣಕ್ಕೆ ಯಾಕೆ ನಮ್ಮ ಅಹಂ ಅಥವ ಸ್ವಾರ್ಥತೆ ವಿರಾಜಮಾನದಿಂದ ಮುಂದೆ ಬಂದು ನಿಲ್ಲುತ್ತದೆಯೊ ಆ ದೇವನೆ ಬಲ್ಲ. ಮೇಲಿನ ಒಂದು ಅನುಭವ ಉದಾಹರಣೆ ಅಷ್ಟೆ, ಈ ಸ್ವಾರ್ಥತೆ ಸಕಲ ಕಾರ್ಯಗಳಲ್ಲಿ ಇದ್ದೆ ತೀರುತ್ತವೆ. ಈ ಸ್ವಾರ್ಥವನ್ನು ಬಿಡಲು ಆಧ್ಯಾತ್ಮ ಒಂದೆ ದಾರಿಯೆ? ಅಥವಾ ಬೇರೆ ದಾರಿ ಉಂಟೆ? ಅಥವ ಕೆಟ್ಟಮೇಲೆ ಬುದ್ಧಿ ಬರಬೇಕೆ. ಇದಕ್ಕೆಲ್ಲ ಸ್ವಾನುಭವದಿಂದ ಅರಿತುಕೊಳ್ಳುವ ನಮ್ಮ ಅರಿವು ಸಹಾಯಮಾಡಬೇಕಷ್ಟೆ ಎಂದು ಅಂಬೋಣವೆ?
Labels: ಲಲಿತ ಪ್ರಬಂಧ