Thursday, April 19, 2018

ಒಂದು ಮೀಸೆಯ ಕಥೆ


"ಮೀಸೆಯುಂ ಪುರುಷ ಲಕ್ಷಣಂ"

ಬಹುತೇಕ ಗಂಡಸರ ಆಸ್ತಿಯೇ ಈ ಮೀಸೆ. ಹದಿಹರೆಯ ಸಮಯದಲ್ಲಿ ಮೂಗು ಮತ್ತು ಬಾಯಿಯ ಮಧ್ಯೆ ಕುಡಿಯಂತೆ ಚಿಗುರಿ ಕ್ರಮೇಣ ದಟ್ಟವಾಗಿ ಬೆಳೆದು ರಾರಾಜಿಸುವ ಈ ಮೀಸೆ ಗಂಡಸರ ಪಾಲಿಗೆ ಹೆಮ್ಮೆಯ ಪ್ರತೀಕ. ಪ್ರೌಢಾವಸ್ಥೆಯ ದಿನಗಳಲ್ಲಿ ಮೀಸೆಯು ಚಿಗುರಿ ಕನ್ನಡಿ ಮುಂದೆ ನಿಂತು ಅವಿರತವಾಗಿ ದೃಷ್ಟಿಸಿದರು ಕಾಡಿದ ಪ್ರಶ್ನೆಗಳು ಹಲವಾರು, ವಯಸ್ಸು ಕಳೆದಂತೆಲ್ಲ ಉತ್ತರಗಳು ಸಿಗುತ್ತಿತ್ತು ಮೀಸೆಯು ದಟ್ಟವಾಗುತ್ತಿತ್ತು. ಕಾಲೇಜು ದಿನಗಳಲ್ಲಿ ಬೇರೆ ಹುಡುಗರತ್ತ ಹಾಗು ಸ್ನೇಹಿತರತ್ತ ಮೂಗಿನ ಕೆಳಗೆ ದೃಷ್ಟಿಸಿದಾಗ ಕೆಲವರಿಗೆ ಕುಡಿ ಮೀಸೆಯಿದ್ದರೆ ಇನ್ನು ಕೆಲವರಿಗೆ ಸಮೂಹವಾಗಿ ಕೂದಲುಗಳು ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ ಬೆಳೆಯುತ್ತಿದ್ದದ್ದು ನನ್ನ ಗಮನಕ್ಕೆ ಬಂದು ಈ ಮೀಸೆಯು ಕಿರಿ ಕಿರಿ ಎಂದು ಹಲವು ಬಾರಿ ಹಲುಬಿದ್ದೇನೆ. ಕೊನೆಗು ಅನಿಸಿದ್ದು ಮೀಸೆಯೆ ಸರಿ, ಮೀಸೆ ಬಿಟ್ಟರೆ ಸೈ ಎಂದು ತೀರ್ಮಾನಿಸಿ ಇನ್ನಷ್ಟು ದಟ್ಟವಾಗಿ ಬೆಳೆಯಲಿ ಎಂದು ಆಶಿಸಿದಾಗ ಒಂದು ದಿನ ಮೀಸೆಯನ್ನು ಬ್ಲೇಡ್ ತಾಗಿಸಿ ಬೋಳಿಸಿಯು ಆಯಿತು, ಆ ದಿನ ನನ್ನಲ್ಲಿ ಆದ ಅನುಭವ ಹೇಳತೀರದು, ಸ್ನಾನವನ್ನು ಮುಗಿಸಿ ಬರುವಾಗ ಎಲ್ಲರ ಚಿತ್ತ ನನ್ನ ಮೀಸೆಯಿಲ್ಲದ ಮುಖಾರವಿಂದದತ್ತ ನಾಟಿ ಕಿಸಕ್ಕನೆ ನಕ್ಕು ಗೇಲಿ ಮಾಡಿದ ಮನೆಯವರು ಹಾಗು ಗೆಳೆಯರು ಹಲವಾರು. ದಿನಗಳು ಉರುಳಿದಂತೆಲ್ಲ ದಪ್ಪವಾಗಿ ದಟ್ಟವಾಗಿ ಮೀಸೆಯು ಬೆಳೆದು ಅದರ ಮೇಲೆ ಒಲವು ಹೆಚ್ಚಿಸಿತು.

ನಮ್ಮ ಸೈನಿಕರು, ರಾಜರು, ಸೇನಾಧಿಕಾರಿಗಳು, ಪಾಳೇಗಾರರು, ಜಮೀನ್ದಾರರು ಮೀಸೆಯನ್ನು ಬಿಡುವ ರೀತಿಯನ್ನು ಗಮನಿಸುತ್ತ ಎಂಜಿನೀಯರಿಂಗ್ ದಿನಗಳಿಗೆ ದಾಪುಗಾಲನ್ನಿಟ್ಟೆ. ಓದಿನ ಕಡೆ ಕೇಂದ್ರಿತವಾಗುತ್ತಿದ್ದಂತೆ ಮೀಸೆಯ ಕಡೆ ಗಮನ ವಾಲಲಿಲ್ಲ. ಎರಡು ಮೂರು ದಿನಕ್ಕೊಮ್ಮೆ ಗಡ್ಡ ಬೋಳಿಸುತ್ತ ಮೀಸೆಯನ್ನು ನೀವುದನ್ನು ಬಿಟ್ಟರೆ ಹೆಚ್ಚಾಗಿ ಅದಕ್ಕೆ ಒತ್ತು ಕೊಡಲಿಲ್ಲ.

ಕೆಲಸಕ್ಕೂ ಸೇರಿ ವಿಶೇಷ ಹವ್ಯಾಸಗಳನ್ನು ಬೆಳೆಸಿಕೊಂಡೆ ಆಗಾಗ್ಗೆ ಕನ್ನಡಿಯ ಮುಂದೆ ನಿಂತು ಮೀಸೆಯ ಚೆಂದ ನೋಡುತ್ತಾ ಬಾಚುವುದು, ಮೀಸೆಯನ್ನು ಎಳೆದು ಅದರ ತುದಿಯನ್ನು ಕಚ್ಚುವುದು, ಮೀಸೆಯ ಮೇಲೆ ಕೈಯಾಡಿಸುತ್ತ ಟ್ರಿಮ್ ಮಾಡಿಕೊಳ್ಳಲಾರಂಭಿಸಿದೆ. ಲೆಫ್ಟಿನೆಂಟ್ ಗ್ರೇಡ್‌ ಕೊಟ್ಟಂತೆ ಮಿಲಿಟರಿಯವನ ಮೀಸೆಯೂ ಗ್ರೇಡಿಗೆ ತಕ್ಕಂತೆ ದಿನವೂ ರೂಪುಗೊಳ್ಳುತ್ತಿತ್ತು. ಮೀಸೆ ಮಿಲಿಟರಿ ಲಕ್ಷಣಂ ಎಂದಾದದ್ದು ಈ ಕಾಲದಿಂದಲೇ ಇರಬೇಕು.

ಸ್ತ್ರೀಮೂಲ, ನದಿಮೂಲ ಎಂಬಂತೆ ಮೀಸೆ ಮೂಲ ಏನು? ಮೀಸೆ ಮೂಲ ಎಲ್ಲಿಂದ ಎಂದು ಕೆದಕಿದಾಗ ಎಲ್ಲೊ ಓದಿದ ನೆನಪು ಅದನ್ನು ತಿಳಿದಾಗ "ಮುಸ್ತ್ಯಾಚ್" ಎಂಬುದು ಫ್ರೆಂಚ್ ಪದ. ಹುಟ್ಟು 16ನೇ ಶತಮಾನ, ಲ್ಯಾಟಿನ್‌ನಲ್ಲಿ ಮೊಸ್ಟ್ಯಾಷಿಯೋ, ಗ್ರೀಕರು ಮುಸ್ತಾಕಿಯೋನ್ ಎಂದು ಹೇಳುತ್ತಾರೆ.

ಮೀಸೆಗೆ ಚರಿತ್ರೆ ಇದೆಯೋ ಇಲ್ಲವೋ ತಿಳಿಯುವ ಗೋಜಿಗೆ ಹೋಗಲಿಲ್ಲ, ಆದರೆ ಮೀಸೆ ಜೊತೆಗೇ ಹುಟ್ಟಿಕೊಂಡ ಅರ್ಥಪೂರ್ಣ ಗಾದೆ, ಹಾಡು, ನಾಣ್ನುಡಿಗಳಂತೂ ಅಮೋಘ. ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ, ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ, ದೋಸೆ ತಿನ್ನುವಾಗ ಮೀಸೆ ಮುರಿವ ಹಾಗೆ, ರಾಜನಿಗೆ ಮೀಸೆ ಮೇಲೆ ಕೈ ಹೋದರೆ ಸಭೆಯೇ ಕಾಣುವುದಿಲ್ಲ, ಮೀಸೆ ಬಂದವನಿಗೆ ದೇಶ ಕಾಣದು ಹೀಗೆ ಅನುಭವದ ನುಡಿಮುತ್ತುಗಳು.

ಮೀಸೆಯ ವ್ಯಾಮೋಹ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ಮಂಗಲ್ ಪಾಂಡೆಯ (ಅಮೀರ್ ಖಾನ್ ನಟಿಸಿರುವ ಚಲನಚಿತ್ರ) ಮೀಸೆಯನ್ನು ಅತ್ಯಂತ ಕುತೂಹಲವಾಗಿ ಗಮನಿಸಿ ಅವನಂತೆ ಮೀಸೆಯನ್ನು ಬೆಳೆಯಲು ಬಿಟ್ಟು ದಿನವೂ ಪರೀಕ್ಷಿಸುತ್ತಿದ್ದೆ, ಮೀಸೆಯ ತುದಿಯನ್ನು ಆಗಾಗ ತಿರುವುತ್ತ ನೀವುತ್ತಿದ್ದೆ. ವಿರಜಾ ಮೀಸೆಯಿಂದ ಸದ್ಯಕ್ಕೆ ಸಿಂಗಮ್ ಮೀಸೆ ಹೊತ್ತಿರುವೆ, ಮೀಸೆಯ ವೈವಿಧ್ಯತೆ ಹಾಗು ಅದರ ಪಟ್ಟಿ ಬೆಳೆಯುತ್ತ ಹೋಗುತ್ತದೆ, ಚಾಪ್ಲಿನ್ ಮೀಸೆ, ಗಿರಿಜಾ ಮೀಸೆ, ಚಿಗುರು ಮೀಸೆ, ಹುರಿಮೀಸೆ, ಕುರಿ ಮೀಸೆ, ಬೆಕ್ಕಿನ ಮೀಸೆ, ಜಿರಳೆ ಮೀಸೆ, ವಿರಜಾ ಮೀಸೆ, ಕಡ್ಡಿ ಮೀಸೆ, ಬಂಗಾರು ಮೀಸೆ, ಮೊಟ್ಟೆ ಮೀಸೆ, ಪೊದೆಮೀಸೆ, ಫಿಲ್ಟರ್ ಮೀಸೆ ಲೆಕ್ಕ ಹಾಕುತ್ತಾ ಹೋದಲ್ಲಿ ದೊಡ್ಡ ಪಟ್ಟಿಯೇ ಬೆಳೆದೀತು. ನನ್ನ ಮೀಸೆ ಸವರಿಕೊಂಡು "ಮುಂದೆ ನನ್ನ ಈ ಮೀಸೆ ಯಾವ ವೈವಿಧ್ಯತೆಗೆ ಪ್ರಯೋಗಿಸಲಿ ಎಂದು ಪ್ರಶ್ನೆ ಉದ್ಭವಿಸಿದೆ, ಸೂರ್ಯವಂಶದ ವಿಷ್ಣುವಿನ ತರಹ ಗಿರಿಜಾ ಮೀಸೆಯ ಮೇಲೆ ಅತೀವ ಒಲವಿದೆ, ಪ್ರಯೋಗಿಸಲೇ ಬೇಕಿದೆ".

ಹೆಸರಿನಲ್ಲೇನಿದ್ದರೂ ಕಾಲ ಕಾಲಕ್ಕೆ ತಕ್ಕಂತೆ ತನ್ನ ರೂಪು, ಲಾವಣ್ಯಗಳನ್ನು ಬದಲಾಯಿಸುತ್ತಲೇ ಬಂದಿದೆ ಈ ಮೀಸೆ.

ನನ್ನ ಬಾಲ್ಯದಲಿ ನಾ ಹೆದರುತ್ತಿದ್ದದ್ದು ಬಾಡಿಗೆ ಮನೆಯ ಹತ್ತಿರವಿದ್ದ "ಲಾಲು" ಎಂಬ ಬೃಹದಾಕಾರದ, ಡೊಳ್ಳುಹೊಟ್ಟೆಯ ಬಟ್ಟೆ ವ್ಯಾಪಾರಿಯ ಮೀಸೆಯನ್ನು ಕಂಡು, ಊರಿನಲ್ಲಿ ಹೆದರುತ್ತಿದ್ದದ್ದು ನನ್ನ ಮಾವನವರ ಗಿರಿಜಾ ಮೀಸೆಯನ್ನು ಕಂಡು. ಇಂದು ಆ ಮೀಸೆಗಳಿಗೆ ನಾ ಹೆದರುತ್ತಿದ್ದುದು ಎಂದು ನೆನೆದರೆ ನಗು ಬರುತ್ತದೆ.

ಮೀಸೆಯಿಂದಲೇ ಪ್ರಸಿದ್ಧಿ ಅಲ್ಲವೇ ಮತ್ತೆ, ದಶಕದ ಹಿಂದಿನ ಸೂರ್ಯವಂಶ, ಯಜಮಾನ ಚಲನಚಿತ್ರದಲ್ಲಿ ವಿಷ್ಣುವಿಗೆ ಭರ್ಜರಿ ಮೀಸೆ, ಅದು ಮೆರಗೂ ನೀಡಿತ್ತು. ಇನ್ನು ಕಮಲ್ ಹಾಸನ್ ನ ವಿರುಮಾಂಡಿ ಮೀಸೆ ಎನ್ನಿ, ಸೂರ್ಯನ ಸಿಂಗಮ್ ಮೀಸೆ ಎನ್ನಿ, ಆಗಿನ ವೀರಪ್ಪನ್ ನ ದೊಡ್ಡ ಗಿರಿಜಾ ಮೀಸೆ ಎನ್ನಿ ಹಾಗೆ ಹಿಟ್ಲರ್ ನ ಮೀಸೆ ಎನ್ನಿ. ಇವರೀರ್ವರು ಗಾಳಿಗೆ ಹಾರಿ ಹೋಗುವಂತಹ ಸಣಕಲು ದೇಹಿಗಳು, ನರಹಂತಕರು. ಒಬ್ಬನಿಗೆ ಗಿರಿಜಾಮೀಸೆ ಮತ್ತೊಬ್ಬನಿಗೆ ಮೂಗಿನ ಹೊಳ್ಳೆಗೆ ಸರಿಯಾಗಿ ಅಂಟಿದ ಮೀಸೆ. ಆ ಮೀಸೆ ನೋಡಿಯೇ ಗಡ-ಗಡ ಎಂದು ನಡುಗುತ್ತಿದ್ದರೆನೋ ಜನ. ಅತ್ತ ದರಿ, ಇತ್ತ ಪುಲಿ ಜೊತೆಗೆ ಸದಾ ತೂಗು ಕತ್ತಿ ನೆತ್ತಿಯ ಮೇಲೆ. ಈರ್ವರೂ ಸತ್ತಾಗ ಅಯ್ಯಪ್ಪಾ ಅಂತೂ ನೀ ಸತ್ಯಲ್ಲಪ್ಪಾ ಎಂದು ನಿಟ್ಟುಸಿರು ಬಿಟ್ಟು ತಮಗೆ ಇದ್ದ ಬದ್ದ ಮೀಸೆ ತೀಡಿದವರೆಷ್ಟೋ ಈಗ ನನ್ನ ಸರದಿ ನಾನು ತೀಡುತ್ತಿದ್ದೇನೆ.

ರಾಜಾ ಮೀಸೆ ಅಂತ ಹೆಸರೇನೋ ಇದೆ ಆದರೆ, ಪೌರಾಣಿಕ ಪಾತ್ರದಲ್ಲಿನ ರಾಮ, ಕೃಷ್ಣ, ವಿಷ್ಣು, ಶಿವನಿಗೆ, ಜೊತೆಗೆ ಇಂದ್ರಾದಿ ದೇವತೆಗಳೂ ಕ್ಲೀನ್‌ಶೇವ್ಡ್. ಸೀತೆ, ರುಕ್ಮಿಣಿ, ಲಕುಮಿ, ಗಿರಿಜೆ ಮತ್ತು ಅಪ್ಸರೆಯರ ಅನುಮತಿ ಸಿಕ್ಕಲಿಲ್ಲವೇ ಅಥವಾ ಮೀಸೆ ಇಲ್ಲದ್ದು ಅವರಿಗೆ ವರವೇ-ಶಾಪವೇ? ಬ್ರಹ್ಮ ಮಾತ್ರ ಇದಕ್ಕೆ ಹೊರತು-ಮೀಸೆ, ಗಡ್ಡ ಎರಡೂ ಜಗತ್ತಿರುವವರೆಗು. ಋಷಿ ಮುನಿಗಳೂ ಬ್ರಹ್ಮನ ಅನುಯಾಯಿಗಳು. ದಾನವರಿಗಂತೂ ಭರ್ಜರಿ ಮೀಸೆ. ಮೀಸೆಗೂ ಸ್ವಭಾವಕ್ಕೂ ಹೊಂದಾಣಿಕೆ ಇದೆಯಾ? ನನ್ನಂತೆ ಮೀಸೆಯಿದ್ದವರಿಗೆ ಇದೊಂದು ಪ್ರಯೋಗಾತ್ಮಕದ ವಿಷಯ. ಶಿವನೂ ಮೀಸೆಯನ್ನು ಬಿಟ್ಟಂತಿಲ್ಲ ಆದರೂ ಗಿರಿಜಾ ಮೀಸೆಗೆ ಗಿರಿಜೆಯ ಹೆಸರು ಹೇಗೆ ಕೂಡಿಕೊಂಡಿತೊ ಆ ಶಿವನೇ ಬಲ್ಲ, ಅಲ್ಲವೆ?

ಕೆಲವರಿಗೆ ಬೆಕ್ಕಿನ ಪ್ರವೃತ್ತಿ, ಉಣ್ಣುವುದು-ತಿನ್ನುವುದು ಎಲ್ಲಾ ಬೆಕ್ಕಿನ ಥರಹವೇ! ಅವರ ಮೀಸೆ ಕೂಡ ಹಾಗೆಯೇ ಏಕೆಂದರೆ ಅವರಿಗೆ ಜಾಸ್ತಿ ಮೀಸೆ ಬೆಳೆಯೋದಿಲ್ಲ, ಆದಕಾರಣ ಅವರು ಮೀಸೆಯ ಜಾಗದಲ್ಲಿ ಅಡ್ಡಡ್ಡ ತಿರುವಿದ ಉದ್ದನೆಯ ಕೆಲವು ಕೂದಲನ್ನು ಬಿಟ್ಟಿರುತ್ತಾರೆ. ಇಂಥವರಿಗೆ ತಲೆಯೂ ಕೂಡ ನವಿಲು ಕೋಸಿನಥರ ಅದರ ಮೇಲೆ ನಾಲ್ಕೇ ನಾಲ್ಕು ಕೂದಲು.

ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾಣಸಿಗುವ ನಾ ಮೇಲೋ ತಾ ಮೇಲೋ ಎಂದು ತಿರುತಿರುವಿ ಬಿಡುವ ತುದಿ ಮೇಲಾದ ಮೀಸೆ ಹುರಿ ಮೀಸೆ! ಉದ್ದ ಹುರಿಯಂತೆ ತಿರುತಿರುವಿ ಬಿಡುವ ಈ ಮೀಸೆಯಲ್ಲಿ ಏನೋ ಸಾಧಿಸಿದ ಹಂಬಲವಿರುತ್ತದೆ, ಅದೇ ಬರಗಾಲ ಬಂದರೂ ಮೀಸೆಗೆ ಬರಗಾಲವಿಲ್ಲ ಅಲ್ಲಿ!

ಈಗೀಗ ಕುದುರೆ ಲಾಳಾಕೃತಿಯ ಮೀಸೆ ಬೆಳೆಸಿ ಅದನ್ನು ಗಡ್ಡಕ್ಕೂ ಸೇರಿಸಿ ಮಧ್ಯದಲ್ಲಿ ಸಣ್ಣ ಬಕ್ರೀ ಕಾ ಗಡ್ಡ ಎಂಬ ಕುರಿ ಗಡ್ಡವನ್ನು ಕೆಳತುಟಿಯ ಕೆಳಗೆ ಬಿಟ್ಟು ಮೆರೆಯುತ್ತಾರೆ!

ಅಂದಹಾಗೆ ನಾನು ಮೂವತ್ತರ ಕೊನೆಯ ಘಟ್ಟದಲ್ಲಿದ್ದೇನೆ, ಈಗಲೆ ಮೀಸೆಯು ಹಣ್ಣಾದಂತೆ ಭಾಸವಾಗುತ್ತಿದೆ, ಎಲ್ಲೊ ಮೀಸೆಯ ಮಧ್ಯೆ ಒಂದೊಂದು ಕೂದಲಿಗೆ ಬಿಳಿ ನೆರೆಯು ತಟ್ಟಿದೆ, ನೆರೆಯು ಸಣ್ಣದಾಗಿ ಘಾಸಿ ಮಾಡಿ ಅದರ ಕೌಶಲತೆ ಹಾಗು ಅದರ ಅಂದವನ್ನು ಹಾಳು ಮಾಡುತ್ತಿದೆ ಎಂದು ಅನಿಸುತ್ತಿದೆ. ಐವತ್ತರ ನಂತರ ಸಂಪೂರ್ಣ ಬಿಳಿ ನೆರೆಯು ಮೆರೆದಾಗ ವಿರಜಾ ಮೀಸೆಯನ್ನೊ ಅಥವಾ ಗಿರಿಜಾ ಮೀಸೆಯನ್ನೊ ಸರಿಯಾಗಿ ನಿರ್ವಹಿಸಿದರೆ ಮತ್ತೊಮ್ಮೆ ಮೀಸೆಯ ಮೇಲೆ ವ್ಯಾಮೋಹ ದುಪ್ಪಟ್ಟಾಗುತ್ತದೆ. ಈ ವೈವಿಧ್ಯತೆಯ ಮೀಸೆಯ ವ್ಯಾಮೋಹ ಕುಗ್ಗದಿರಲಿ, ಮೀಸೆಯನ್ನು ಬೆಳೆಸುವ ಉತ್ಸಾಹ ಇಮ್ಮಡಿಸಲಿ, ಗಡ್ದವನ್ನು ಹೊರತುಪಡಿಸಿ :-) ಎಂದು ಆ ಬ್ರಹ್ಮನಲ್ಲಿ ಹಲುಬುತ್ತೇನೆ.

ಮೀಸೆಯಿದ್ದವನಿಗೆ ಗೊತ್ತು ಮೀಸೆಯ ಮೀಮಾಂಸೆ !!

Labels:

0 Comments:

Post a Comment

Subscribe to Post Comments [Atom]

<< Home