Thursday, April 19, 2018

ಆತ್ಮಗತ



ಹುಟ್ಟೂರು - "ಮತ್ತಿಕಾಡು"

ದೊಡ್ಡ ಕಾನನದ ಹೊದಿಕೆಯ ಹೊದ್ದು, ಸಣ್ಣ ತುಣುಕಿನ ಭಾಗವಾದ ಪಶ್ಚಿಮ ಘಟ್ಟವನ್ನು ಮೋಡವು ತಬ್ಬಿದ್ದನ್ನು ಕಣ್ತುಂಬಿಕೊಳ್ಳುತ್ತ, ವಿಸ್ಮಯ ಬಾನಾಡಿಯಲ್ಲಿ ಕೇಸರಿ ಬಣ್ಣವನ್ನು ಸವಿಯುತ್ತಾ, ಪ್ರಕೃತಿಯ ಅನವರತ ಸೋಜಿಗಗಳಿಗೆ ಬೆರಗಾಗಿ, ಉಸಿರು, ನಿಟ್ಟುಸಿರು, ಉತ್ಸಾಹ, ಮನೋಲ್ಲಾಸ, ರೋಮಾಂಚನ ಮುಂತಾದ ವಿಭಿನ್ನ ಭಾವನಾತ್ಮಕವಾದ, ಮನಸೂರೆಗೊಳ್ಳುವ ಕಿರಿದಾದ ಮುಖ್ಯರಸ್ತೆ ಇಕ್ಕೆಲಗಳಲ್ಲಿ ಸಣ್ಣಪುಟ್ಟ ಕಿರಾಣಿ ಅಂಗಡಿಗಳ ಸಮೂಹವ, ಮಂಗಳೂರಿನ ಹೆಂಚನ್ನು ಹೊದ್ದಿರುವ ಪುಟ್ಟ ಮನೆಗಳು ಕೈ ಬೀಸಿ ಕರೆದುಕೊಳ್ಳುವ ನನ್ನ ಹುಟ್ಟೂರು "ಮತ್ತಿಕಾಡು" ದಕ್ಷಿಣ ಕಾಶಿ ಕೊಡಗಿನ ಸುಂಟಿಕೊಪ್ಪದಲ್ಲಿರುವ ಪುಟ್ಟ ಊರು.

ತಳವೂರಿರುವುದು ಬೆಂಗಳೂರಿನಲ್ಲಿ ಸೆಳೆತವಿರುವುದು ಕೊಡಗಿನ ರಮಣೀಯ ಹುಟ್ಟೂರಿನಲ್ಲಿ. ವೀರಾಜಪೇಟೆಯಿಂದ ಚೆಟ್ಟಳ್ಳಿ ದಾರಿಯನ್ನು ಅನುಸರಿಸಿದರೆ ಅತ್ತೂರು-ನಲ್ಲೂರು, ಭೂತನಕಾಡು ದಾಟಿ ಬಲಕ್ಕೆ ಹೊರಳಿ ಮಣ್ಣಿನ ರಸ್ತೆಯಲ್ಲಿ ಒಂದು ಫರ್ಲಾಂಗಿನಷ್ಟು ಕ್ರಮಿಸಿದರೆ ಪೂರ್ವಾಭಿಮುಖವಾಗಿ ಸಿಗುವ ಮಾರಮ್ಮನ ಗುಡಿಯ ಬದಿಯಲ್ಲಿ ನನ್ನ ತಾಯಿಯ ಮನೆ ಆ ಮನೆಯಲ್ಲಿಯೆ ನನ್ನ ಜನನ.

ಕುಶಾಲನಗರದಿಂದ ಕ್ರಮಿಸಿ ಸುಂಟಿಕೊಪ್ಪ ಊರನ್ನು ದಾಟಿ ಗದ್ದೆಹಳ್ಳ ಅನುಸರಿಸಿ ಬಂದರು "ಮತ್ತಿಕಾಡು" ತಲುಪಲುಬಹುದು.

ಕಿರಿದಾದ ಮಣ್ಣಿನ ರಸ್ತೆಯಲ್ಲಿ ನಡೆಯುತ್ತಿರುವಾಗ ಕಾಫಿ ತೋಟದ ಘಮಲು, ಬಿಬ್ಬಿರಿಯ ನಿನಾದ, ದುಂಬಿಗಳ ಝೇಂಕಾರ ಗುಡಿಯ ನಾಲ್ಕು ದಿಕ್ಕುಗಳಲ್ಲಿ ಹೊಮ್ಮುತ್ತಿತ್ತು, ಇವೆಲ್ಲವೂ ಆಹ್ವಾನಿಸುತ್ತಿತ್ತು. ಗುಡಿಯ ಮುಂಭಾಗದಲ್ಲಿ ದೊಡ್ಡ ಆಲದ ಮರ ಅದರ ನೆರಳಲ್ಲಿ ಕೂತಾಗ ಆಗುವ ಹಿತವಾದ ಅನುಭವ ಅವರ್ಣನೀಯ. ಆಲದ ಮರದ ಎಡಭಾಗಕ್ಕೆ ವಿಸ್ತಾರವಾದ ಹುಲ್ಲಿನ ಅಂಗಳ ಅದಕ್ಕೆ ಆನಿಸಿಕೊಂಡಿರುವ ಕಿರಿದಾದ ರಸ್ತೆ ಕೊಡಗರಹಳ್ಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅದರ ಛಾಯಾಚಿತ್ರವನ್ನು ತೆಗೆದು ದಿಟ್ಟಿಸಿದಾಗ ಬ್ರಹ್ಮನಲ್ಲಿ ಲೀನವಾಗುವಂತೆ ಭಾಸವಾಗುತ್ತಿತ್ತು. ಬಾಲ್ಯ ಅಷ್ಟಾಗಿ ಕಳೆದಿಲ್ಲವಾದರು ಸೆಳೆತವು ಅದಮ್ಯ ಹಾಗು ನೆನಪುಗಳು ಅಮರ. ಮೂರು ವರ್ಷಗಳ ಹಿಂದೆ ಹುಟ್ಟೂರಿಗೆ ಭೇಟಿಕೊಟ್ಟು ತೆರಳಿದಾಗ ಮನಸ್ಸೆಲ್ಲ ಖಾಲಿ, ಒಳಗೆ ನೀರವ ಮೌನ.

ಕಾಡಿನ ಸೆರಗು ನೆನಪಾದಾಗ ಮತ್ತೆ ಆ ಹುಡುಗಾಟದ ಬಾಲ್ಯದ ಲೋಕಕ್ಕೆ ಹೋಗೋಣವೆಂದು ಹಪಹಪಿಸುತ್ತದೆ. ಮನದ ಭಾವಗಳ ಭೋರ್ಗರೆತ, ನೆನಪುಗಳ ವರ್ಷಧಾರೆ ಆಗಾಗ ಇದಿರಾಗುವ ನಿಸ್ಸಹಾಯಕ ಸ್ಥಿತಿ, ಗೊಂದಲ, ಹತಾಶೆ, ನಿರಾಸೆ, ತಾಪತ್ರಯಗಳಿಂದ ಬಿಡುಗಡೆಯನ್ನು ಹೊಂದಿ, ಶಾಂತತೆಯನ್ನು ಬಯಸಿದಾಗ ಕೂಡಲೇ ನನ್ನೂರಿನ ಕಡೆಗೆ ಮನಸ್ಸು ಹಾಯುತ್ತದೆ. ನೆನಪಿನ ಬತ್ತಿ ತಂತಾನೇ ಹತ್ತಿಕೊಳ್ಳುತ್ತದೆ. ಎಣಿಸಲಾರದಷ್ಟು ನೆನಪುಗಳು ಮನದ ಪರದೆಯಲ್ಲಿ ಪ್ರಕಟವಾಗುತ್ತದೆ.

ವಾಸ್ತವದಲ್ಲಿ ಜೀವನದ ದಾರಿ ಎಲ್ಲಿಗೆ ಕರೆದುಕೊಂಡು ಹೋಗುತ್ತದೆಯೊ ಅದನ್ನು ನಾ ಅರಿಯೆ ಅದೇ ಸೋಜಿಗದ ಸಂಗತಿ, ಮನಸ್ಸಿನ ಮೂಲೆಯಲ್ಲಿ ನನ್ನ ಹುಟ್ಟೂರಿನ ದಾರಿಯನ್ನು ಹಾಗು ಅದರ ಓಜಸ್ಸನ್ನು ಹಿಡಿಯುವ ಕಾತುರತೆ ಹಾಗು ಉತ್ಸಾಹದ ಚಿಲುಮೆ ಕೊನರುತ್ತದೆ, ಆದರೆ ಸದ್ಯಕ್ಕೆ ಆಸೆಯು ಕೈಗೂಡುವ ಸ್ಥಿತಿಯಲ್ಲಿಲ್ಲ.

ತಿಳಿದಿಲ್ಲ ಜೀವನದ ಇಳಿಸಂಜೆಯಲ್ಲಿ ಮನಸ್ಸಿಗೆ ಆಹ್ಲಾದವನ್ನೀಯುವ ಆ ಸ್ಥಳವು ನನ್ನನ್ನು ಆಲಂಗಿಸುತ್ತದೆಯೋ ಕಾದು ನೋಡಬೇಕಿದೆ. ಬ್ರಹ್ಮನೇ ಮೊದಲು ಬರೆದಿಟ್ಟ ಹಣೆಯಬರಹವನ್ನು ಅಳಿಸಿ, ಅವಲೋಕಿಸಿ "ನೀ ಅಲ್ಲಿಗೆ ಹೋಗಯ್ಯ" ಎಂದು ಅಲ್ಲಿಗೆ ದಬ್ಬಿದರೆ ಅದೊಂದು ಪವಾಡವೆ ಸರಿ. ನೆನಪುಗಳನ್ನು ಮಡಿಲಿನಲ್ಲಿ ತುಂಬಿಸಿಕೊಂಡು ಹೋಗಲು ಬಂದ ನನಗೆ ನಿರಾಸೆಯಾಗದೆ ಇರಲಿ, ಪವಾಡವೇ ನಡೆಯಲಿ ಎಂದು ಬ್ರಹ್ಮನಲ್ಲಿ ಹಲುಬುತ್ತೇನೆ. ಹುಟ್ಟೂರು ಮೂಕವಾಗದೆ ಇರಲಿ ಅದರ ರಮಣೀಯತೆಯನ್ನು ಕಾಯ್ದುಕೊಂಡಿರಲಿ ನಾ ಬರುವವರೆಗೆ.

Labels:

0 Comments:

Post a Comment

Subscribe to Post Comments [Atom]

<< Home