Saturday, June 30, 2012

ಟ್ರಾಫಿಕ್ ಕಿಕ್ಕಿರಿ - ವಾಹನ ಸವಾರರ ಅನಾಗರಿಕ ಪ್ರಜ್ಞೆ



ಎಲ್ಲರಿಗು ತಿಳಿದಿರುವಂತೆ ಇಡೀ ದೇಶದಲ್ಲೇ ಬೆಂಗಳೂರು ನಗರವು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಐಟಿ ಉದ್ಯಮಿಕೆಯ ತೀವ್ರ ಬೆಳವಣಿಗೆಯಿಂದ ಈ ನಗರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿರುವುದರಿಂದ ನಗರದ ಜನಸಂಖ್ಯೆಯಲ್ಲಿ ತೀಕ್ಷ್ಣವಾದ ಏರಿಕೆಯನ್ನು ಕಾಣಬಹುದಾಗಿದೆ. ಜನಸಂಖ್ಯೆಯು ನಗರದೊಳಗೆ ಸ್ಥಿರವಾಗಿದೆಯಾದರು ಹೊರವಲಯದಲ್ಲಿರುವ ಗ್ರಾಮೀಣ ಸ್ಥಳಗಳು ಸೂಕ್ಷ್ಮವಾಗಿ ಬೆಳೆಯುತ್ತಿದೆ . ಇದಕ್ಕೆ ಅನುಗುಣವಾಗಿ ಜನರ ವ್ಯವಹಾರದ ಚಟುವಟಿಕೆಗಳಲ್ಲಿ ವೃಧ್ದಿಯಾಗುತ್ತಿದ್ದು, ಇದರ ಪರಿಣಾಮ ವಾಹನಗಳು ಅಧಿಕಗೊಳ್ಳುತ್ತಿದ್ದು,  ವಾಹನ ಸಂಚಾರದ ಒತ್ತಡವನ್ನು ಹತ್ತಿಕ್ಕಲು ಸಂಚಾರ ಪೋಲೀಸರು ವಿವಿಧ ಕಾರ್ಯಯೋಜನೆಯನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದ್ದಾರೆ. ಎರಡು ದಶಕಗಳ ಹಿಂದೆ ನಗರದಲ್ಲಿ ಅಣಬೆಗಳಂತೆ ತಲೆ ಎತ್ತಿ ನಿಂತಿರುವ ಐಟಿ ಕಂಪನಿಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳ ತೀವ್ರ ಬೆಳವಣಿಗೆಯಿಂದ ಈಗಿನ ವಾಹನಗಳ ಸಂಖ್ಯೆ 1.50 ಮಿಲಿಯನ್‌ಗೂ ಅಧಿಕಗೊಂಡಿದ್ದು, ವಾರ್ಷಿಕ 7-10% ರಷ್ಟು ಅಧಿಕಗೊಳ್ಳುತ್ತಿದೆ. ನಗರವು ಜನಸಂಖ್ಯೆ ಹಾಗೂ ವಿಸ್ತೀರ್ಣದಲ್ಲಿ ಬೆಳದಂತೆಲ್ಲಾ, ಸಮಸ್ಯೆಗಳ ಸರಮಾಲಯೇ ಉದ್ಭವವಾಗುತ್ತಿದೆ. ಕಾರ್ ಮತ್ತು ದ್ವಿಚಕ್ರ ವಾಹನಗಳನ್ನು ಸ್ವಂತ ಓಡಾಟಕ್ಕೆ ಬಳಸುತ್ತಿರುವುದು ಸಾಮಾನ್ಯವಾಗಿದ್ದು, ಇದರಿಂದ ಸುಮಾರು ಶೇಕಡ 90% ರಷ್ಟು ನೊಂದಾಯಿಸಿದ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟು ವಾಹನಗಳ ಸಾಂದ್ರತೆಯಲ್ಲಿ ದ್ವಿಚಕ್ರವಾಹನಗಳ ಸಂಖ್ಯೆಯೇ ಶೇಕಡ 70% ರಷ್ಟಿದ್ದು, ಕಾರ್ ಶೇಕಡ 15% ರಷ್ಟು, ಅಟೋರಿಕ್ಷಾಗಳ ಸಂಖ್ಯೆ 4%ರಷ್ಟು ಹಾಗೂ ಉಳಿದ ವಾಹನಗಳಾದ ಬಸ್, ವ್ಯಾನ್ ಮತ್ತು ಟೆಂಪೋಗಳ ಸಂಖ್ಯೆ ಶೇಕಡ 8% ರಷ್ಟಿರುತ್ತದೆ. ಮುಂಬರುವ ವರ್ಷಗಳಲ್ಲಿ ವಾಹನಗಳು ದ್ವಿಗುಣದಷ್ಟು  ಹೆಚ್ಚಾದರು ಸಂಶಯವಿಲ್ಲ ಏಕೆಂದರೆ ಇತ್ತೀಚಿನ ದಿನಗಳಲ್ಲಿ ವಾಹನ ಕೊಳ್ಳುವಿಕೆಗೆ ಸಾಲವನ್ನು ನೀಡುವ ಸಂಸ್ಥೆಗಳ ವ್ಯವಸ್ಥೆಯು ಗ್ರಾಹಕರಿಗೆ ಕೈಗೆಟುಕುವಷ್ಟು ಸುಲಭ ಸಾಧ್ಯವಾಗಿದೆ. 


ವಾಹನಗಳ ದಟ್ಟಣೆಯಿಂದ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತಲಿರುವುದು ಆಘಾತಕರ ಸಂಗತಿ  ಇಂತಹ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ. ಮೊಟ್ಟ ಮೊದಲನೆಯದಾಗಿ ನಾವು ನಾಗರಿಕ ಪ್ರಜ್ಞೆಯನ್ನು ಹೊಂದುವುದು ಅತ್ಯವಶ್ಯವಾಗಿದೆ, ಎಡದಿಂದ ಎಗ್ಗಿಲ್ಲದೆ ಬಲಗಡೆಗೆ ನುಗ್ಗಿ ಸರಿಯಾದ ಪಥದಲ್ಲಿ ಚಲಾಯಿಸುವವನನ್ನು ಗಾಬರಿಗೊಳಿಸುವುದು, ದ್ವಿಚಕ್ರ ವಾಹನದವರು ಜಾಮ್ ಆದ ಕಡೆ ಫುಟ್ ಪಾತ್ ಅನ್ನು ಬಳಸಿಕೊಂಡು ಪಾದಚಾರಿಗಳಿಗೆ ಅನಾನುಕೂಲತೆಯಲ್ಲಿ ಮುಳುಗಿಸುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಅನಾಗರಿಕ ವರ್ತನೆಯಿಂದ ವಾಹನವನ್ನು ಚಲಾಯಿಸುವವ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತಹ ಪ್ರಸಂಗ ಒದಗುತ್ತಿದೆ. ನಿಲುಗಡೆಯ ದೀಪ ಹೊತ್ತಿದಾಗ ನೋಡಿಯು ನೋಡದಂತೆ ವಾಹನವನ್ನು ರಭಸವಾಗಿ ಚಲಾಯಿಸುವುದು  ಅಪಾಯಕಾರಿ ವಿಷಯವಾದರು ವಾಹನವನ್ನು ನಿಲ್ಲಿಸುವ ಪ್ರಜ್ಞೆಯನ್ನು ನಾವು ಪಾಲಿಸುತ್ತಿಲ್ಲ ಎಂಬುದು ಕಡು ಸತ್ಯ. ವಾಹನವನ್ನು ಸ್ಟಾಪ್ ಲೈನ್ ನ ಒಳಗೆ ನಿಲ್ಲಿಸುವುದನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಗೆರೆಯ ಆಚೆ ನಿಲ್ಲಿಸಿ ಪಾದಚಾರಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಎಡೆಮಾಡಿಕೊಡುತ್ತಿದ್ದೇವೆ. ದಟ್ಟಣೆ ಜಾಸ್ತಿಯಾಗುತ್ತಿದೆ ಸರಕಾರವು ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ ಎಂದು ಬೊಬ್ಬಿಡುವಲ್ಲಿ ನಾವು ಸಮರ್ಥರಾಗಿದ್ದೇವೆ ವಿನಃ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಲ್ಲಿ ಇಲ್ಲ. ಮೊದಲು ನಾವು  ಪ್ರಜ್ಞೆಯನ್ನು ಬೆಳೆಸಿಕೊಂಡು ಅದನ್ನು ಪಾಲಿಸುವಲ್ಲಿ ಸಫಲರಾಗಬೇಕು. ಕ್ರಮವಾದ ಪಥದಲ್ಲಿ ಚಲಿಸಿ ಪರಿಮಿತಿ ವೇಗದಲ್ಲಿ ವಾಹನವನ್ನು ಚಲಾಯಿಸಬೇಕಿದೆ. ನಿಯಮಪಾಲನೆಯಿಂದ ವಾಹನವನ್ನು ಚಲಾಯಿಸಿದರೆ ಟ್ರಾಫಿಕ್ ನ ಕಿಕ್ಕಿರಿಯು ಅರ್ಧ ಕಡಿಮೆಯಾಗುತ್ತದೆ ಎಂದರೆ ತಪ್ಪಾಗಲಾರದು. ಆ ಶಿಸ್ತುಪಾಲನೆಯನ್ನು ನಾವು ಪಾಲಿಸಿ ನಮ್ಮ ಯುವ ಜನಾಂಗದವರಿಗೆ ತಿಳಿಸಿ ಕಲಿಸಬೇಕಿದೆ.


ಟ್ರಾಫಿಕ್ ಕಿಕ್ಕಿರಿಯ ಸಮಸ್ಯೆಯಿಂದ ಪರಿಹಾರವನ್ನು ಅಗತ್ಯವಾಗಿ ಹುಡುಕಬೇಕಿದೆ, ಇರುವ ರಸ್ತೆಗಳನ್ನು ಸರಿಯಾಗಿ ಅಭಿವೃದ್ಧಿ ಪಡಿಸಿ, ಹಳ್ಳಕೊಳ್ಳಗಳನ್ನು ಸರಿಯಾಗಿ ಮುಚ್ಚಿಸಿ, ರಸ್ತೆಯ ಕಾಮಗಾರಿಯನ್ನು  ಭ್ರಷ್ಟತನವಿಲ್ಲದೆ ಕಾರ್ಯಯೋಜನೆಗೆ ತರುವಲ್ಲಿ ಪ್ರಾಧಿಕಾರವು ಸಫಲವಾದರೆ ಕಿಕ್ಕಿರಿಯ ಸಮಸ್ಯೆಯು ಕೊಂಚ ನಿವಾರಣೆಯಾಗುತ್ತದೆ. ರಸ್ತೆಯ ಅಗಲೀಕರಣಕ್ಕೆ ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಅವಲೋಕಿಸಬೇಕಿದೆ. ನಗರದಲ್ಲಿರುವ ರಸ್ತೆಗಳ ಪರಿಮಿತಿಯ ಸಾಮರ್ಥ್ಯವನ್ನು ಸಮರ್ಥನೀಯವನ್ನಾಗಿ ಮಾಡಲು, ಒಳ್ಳೆಯ ಅಭಿವೃದ್ಧಿ, ಅತ್ಯುತ್ತಮವಾದ ಸಾರ್ವಜನಿಕ ಸೇವೆ, ಸಂಯೋಜಿತ ಮತ್ತು ಮಲ್ಟಿಮೋಡಲ್ ಸಾರಿಗೆ ವ್ಯವಸ್ಥೆ ಅತ್ಯಗತ್ಯ. ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ ಹಾಗು ಮೆಟ್ರೊ ಬಸ್ ಗಳ ಸೇವೆ ಗಣನೀಯವಾಗಿ ಟ್ರಾಫಿಕ್ ಜಾಮ್ ಅನ್ನು ಕಡಿಮೆ ಮಾಡಬಹುದು. ರಾಮನಗರ, ದೊಡ್ಡಬಳ್ಳಾಪುರ, ತುಮಕೂರು ಸ್ಥಳಗಳಿಗೆ ಈಗಿರುವ ರೈಲ್ವೆಯ ಮೂಲ ಸೌಕರ್ಯಗಳನ್ನು ಬಳಸಿಕೊಂಡು ರೈಲಿನ ಆವರ್ತನವನ್ನು ಅನುಗುಣಕ್ಕನುಸಾರವಾಗಿ ಆ ಸ್ಥಳಗಳಿಗೆ ಉಪಯೋಗಿಸಿಕೊಂಡಲ್ಲಿ ಟ್ರಾಫಿಕ್ ಕಿಕ್ಕಿರಿಯನ್ನು ಕಡಿಮೆ ಮಾಡಬಹುದು.


ಶಿಸ್ತು ಬದ್ಧವಾಗಿ ಕ್ರಮಗಳನ್ನು ಪಾಲಿಸಿಕೊಂಡು ಬಂದಲ್ಲಿ ಸಮಸ್ಯೆಗಳು ಉಲ್ಬಣಿಸುವ ಪ್ರಮೇಯವೇ ಇರುವುದಿಲ್ಲ, ಅಪಘಾತಗಳು ಕೂಡ ಕ್ಷೀಣಿಸುತ್ತವೆ ಆ ನಿಟ್ಟಿನಲ್ಲಿ ಹೊಸ ವರುಷದಂದು ಕ್ರಮ ಬದ್ಧವಾದ ಹಾಗು ಶಿಸ್ತ್ಯಾನುಸಾರವಾಗಿ ವಾಹನವನ್ನು ಚಲಾಯಿಸುವ  ಸಂಕಲ್ಪವನ್ನು ಹಮ್ಮಿಕೊಳ್ಳಬೇಕಾಗಿದೆ.

3 Comments:

At July 1, 2012 at 7:18 PM , Blogger NANJUNDARAJU said...

ಮಾನ್ಯರೇ, ಒಳ್ಳೆಯ ಲೇಖನ ಬರೆದಿದ್ದೀರಿ. ಸಾರ್ವಜನಿಕರು ಮಾಡುವ ತಪ್ಪುಗಳನ್ನು ಗುರುತಿಸಿದ್ದಿರಿ. ಇದರಲ್ಲಿ ಅನೇಕ ಕಾರಣಗಳಿವೆ. ಅಂದರೆ, ಮೊದಲು ರಸ್ತೆಯ ಅವ್ಯವಸ್ಥೆ. ಹೊಸ ವಾಹನವನ್ನು ತೆಗೆದುಕೊಳ್ಳುವಾಗ, ಅದಕ್ಕೆ ತಪ್ಪದೆ ತೆರಿಗೆ ವಿಧಿಸುತ್ತಾರೆ. ಆದರೆ ಅದೇ ನಮಗೆ ರಸ್ತೆ ಚೆನ್ನಾಗಿರಬೇಕು ಎಂದು ಕೇಳುವ ಹಕ್ಕಿರುವುದಿಲ್ಲ. ಇನ್ನು ಅದೇ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇರುವುದಿಲ್ಲ. ಇದ್ದರೂ ಮೊರಿಯಲ್ಲೋ ಹಳ್ಳದಲ್ಲೋ ನಿಲ್ಲಿಸಬೇಕು. ಅದನ್ನು ಕೇಳುವ ಹಕ್ಕು ನಮಗಿಲ್ಲ. ಇನ್ನು ಸಿಗ್ನಲ್ ಲೈಟುಗಳು ಒಂದೊಂದು ರಸ್ತೆಯಲ್ಲಿ ಒಂದೊಂದು ರೀತಿಯಲ್ಲಿರುತ್ತವೆ. ಸಾಮಾನ್ಯವಾಗಿ, ಸಿಗ್ನಲ್ ಲೈಟುಗಳು ಕೆಂಪು ದೀಪ ಬಂದಾಗ ನಿಂತಿರುತ್ತೇವೆ ನಂತರ ಹಳದಿ ಲೈಟು ಬಂದು ನಂತರ ಹಸಿರು ದೀಪ ಬರಬೇಕು ಕೆಲವು ಸಾರಿ ಹಳದಿ ಲೈಟು ಬರುವುದೇ ಇಲ್ಲ. ಏಕಾಏಕಿ ಹಸಿರು ದೀಪಗಳು ಬರುತ್ತವೆ. ಇದರಿಂದ ವೇಗವಾಗಿ ಬರುತ್ತಿರುವ ವಾಹನಗಳು ನಿಲ್ಲುವುದು ಕಸ್ತವಾಗುತ್ತವೆ. ಇಲ್ಲ ಅಪಘಾತಗಳಾಗುತ್ತವೆ.ಇನ್ನು ಕೆಲವು ಕಡೆ ವಾಹನ ದಟ್ಟನೆ ಹೆಚ್ಚಾಗಿರುವ ರಸ್ತೆಗಳಲ್ಲಿ ಕಡಿಮೆ ಸಮಯಾವಕಾಶವಿರುತ್ತದೆ. ಇದರಿಂದಲೂ ವಾಹನ ಸವಾರರು ಕಚೇರಿ ಅವಧಿಯಲ್ಲಿ ಆತಂಕಕ್ಕೆ ಈಡಾಗುತ್ತಾರೆ. ನೀವು ತಿಳಿಸಿರುವಂತೆ ಕೆಲವು ವಾಹನ ಸವಾರರು ನಿಯಮ ಮೀರುವುದು ಉಂಟು. ಅ ಸಮಯದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಅ ಸಮಯದಲ್ಲಿ ಪೊಲೀಸರು ಸ್ಥಳದಲ್ಲಿ ಇರುವುದಿಲ್ಲ. ಇಂತವುಗಳನ್ನು ಮೇಲಧಿಕಾರಿಗಳು ಗಮನಿಸಿದರೆ ಸೂಕ್ತ.

 
At July 4, 2012 at 6:22 PM , Anonymous Mamata said...

I completely agree with Nanjunda raju..and sir you writing style is superb..you make us think on this..thanks for this article..keep writing..

 
At July 5, 2012 at 3:33 PM , Blogger Santhoshkumar LM said...

ನಾಗರೀಕ ಪ್ರಜ್ಞೆಯೂ ಎಷ್ಟೊಂದು ಮುಖ್ಯ ಎಂಬ ವಿಚಾರವನ್ನು ಬಹಳ ಚೆನ್ನಾಗಿ ತಿಳಿಸಿದ್ದೀರಿ.
ಇದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳುವುದು ಬಹಳ ಅಗತ್ಯ,

 

Post a Comment

Subscribe to Post Comments [Atom]

<< Home