Thursday, July 14, 2011

’ಆಡಿ’ಕೊಂಡವ ಎಲ್ಲಾ ಬಿಟ್ಟವ

ಅಪರೂಪಕ್ಕೆ ದೂರದ ಸೋದರಿಕೆಯ ಅತ್ತೆಯ ದೂರವಾಣಿ ಕರೆ. ಅಮ್ಮ ಎಂದಿನಂತೆ ಕುಶಲ ಕ್ಷೇಮ ವಿಚಾರಿಸಿಕೊಂಡ ಮೇಲೆ ದೂರದ ನೆಂಟರಿನ ಅಜ್ಜಿಯ ಮಗಳ ಮಗನಿಗೆ ನಿಶ್ಚಯವಾಯಿತಂತೆ ಎಂದು ಅತ್ತಲಿಂದ ಮಾತಿಗಿಳಿದರು, ಮಾತುಕತೆ ಎಲ್ಲಾ ಮುಗಿದು ಗಂಡು ಹೆಣ್ಣು ಅರ್ಥಮಾಡಿಕೊಳ್ಳುವಷ್ಟರಲ್ಲಿ ಸಂಬಂಧವು ಮುರಿದುಬಿತ್ತಂತೆ, ಕಾರಣವೇನಿರಬಹುದು ಗೊತ್ತೆ ನಿನಗೆ ಎಂದು ಕೇಳಲು ಅನುವುಮಾಡಿಕೊಂಡರು. ಅಮ್ಮ ಸುಮ್ಮನಿದ್ದಾಗ ಆಗ ಅವರೆ ಬಣ್ಣಕಟ್ಟಿಕೊಂಡು ಆಡಿಕೊಳ್ಳಲು ಶುರುಮಾಡಿಕೊಂಡರು. ಗಂಡು ಹೆಣ್ಣು ಇಬ್ಬರು ಒಳ್ಳೆಯ ಜೋಡಿ ಆಗಿದ್ದರು ಹುಡುಗಿಯ ಕಡೆ ಸಂಬಂಧಿಕರು ಹುಡುಗನ ಗುಣ ಸರಿಯಿಲ್ಲ ಎಂದು ಚುಚ್ಚಿದ್ದಾರಂತೆ, ಇದು ನಿಜವಿರಲು ಬಹುದು ಎಂದು ಉಲಿದುಕೊಂಡು ಹೇಳುತ್ತ ಹೋದದ್ದು ಗಮನಿಸಿದೆ. ಅಮ್ಮ ಕೇಳಿಸಿಕೊಂಡು ಸುಮ್ಮನಾಗಿ ಏನು ವಿಮರ್ಶಿಸದೆ ಇತ್ತಲಿಂದ ಫೋನಿತ್ತರು.


ಹಲವು ಚುಚ್ಚುವಿಕೆಯ ಬಣ್ಣಗಳುಳ್ಳ ಮಾತುಗಳು ಕಿವಿಗೆ ಬಿದ್ದರು ಉದಾಸೀನವೆ ಸರಿಯಾದ ದಾರಿ ಎಂದು ತೀರ್ಮಾನಿಸಿ ಸತ್ಯಾನ್ವೇಶಿಸಿದಾಗ ಆಗಿದ್ದೆ ಬೇರೆ ಹುಡುಗಿಯು ಒಲ್ಲೆ ಎಂದಿದ್ದು ನಿಜ, ಏನು ಹೇಳದೆ ನನಗೆ ಈ ಸಂಬಂಧ ಖಡಾಖಂಡಿತವಾಗಿ ಬೇಡ ಎಂದು ಹೇಳಿದಳಂತೆ. ಅಷ್ಟೆ ಮತ್ತಿನ್ನೇನು ಹೇಳಿಕೆ ನೀಡಲಿಲ್ಲ. ಇಷ್ಟಕ್ಕೆ ಬಣ್ಣಕಟ್ಟಿ ಮಾತಿನ ಆಸ್ವಾದವನ್ನು ಮೆದ್ದಿದ್ದಾರೆ ಎಂದು ತಿಳಿದು ಬೇಸರವಾಯಿತು.


ಏಪ್ರಿಲ್ ಅಥವಾ ಮೇ ತಿಂಗಳು ಬಂದರೆ ಮುಗಿದೆಹೋಯಿತು ಮಕ್ಕಳ ಫಲಿತಾಂಶದ ಮಾಸ, ಅದರಲ್ಲು ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ ವಿದ್ಯಾರ್ಥಿಗಳ ಫಲಿತಾಂಶ ಈ ಆಡಿಕೊಳ್ಳುವಿಕೆಯಲ್ಲಿಯೆ ಅವರ ಭವಿಷ್ಯ ನಿಂತಿರುತ್ತದೆ. ಶೇಖಡ ೧೦೦ ಕ್ಕೆ ೧೦೦ ರಷ್ಟು ಬಂದಿದ್ದರೂ ಕೂಡ ಮೂರನೆ ವ್ಯಕ್ತಿಗಳ ಮಾತು ನಿಲ್ಲುತ್ತದೆ ಎಂದು ಅಂದುಕೊಂಡರೆ ಅದು ತಪ್ಪು ಅಲ್ಲಿಯು ಕೂಡ ಬೇರೆಯವರ ಹತ್ತಿರ ಚುಚ್ಚಿಹೇಳಿಕೊಳ್ಳುತ್ತಾರೆ "ನನಗ್ಯಾಕೋ ಸಂಶಯವೆಂದು". ಇನ್ನು ವಿದ್ಯಾರ್ಥಿಯು ಅನುತ್ತೀರ್ಣನಾಗಿದ್ದರೆ ಅವನ ಅಥವಾ ಅವಳ ಕಥೆಯು ಮುಗಿದಂತೆಯೆ. ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತವೆ.


ನಮ್ಮ ಮನಸ್ಸು ಯಾಕೆ ಹೀಗೆ? ನಮ್ಮ ಬಗ್ಗೆ ಯೋಚನೆ ಮಾಡುವ ಬದಲು ಮತ್ತೊಬ್ಬರ ಬಗೆಗಿನ ಯೋಚನೆಗಳನ್ನು ಕಟ್ಟಿಕೊಂಡು ಬಣ್ಣಕಟ್ಟಿ ಆಡಿಕೊಳ್ಳುತ್ತೇವೆ. ಸದುದ್ದೇಶದ ಯೋಚನೆಯಾದರೆ ಒಳಿತು ಆದರೆ ಅದು ಬಿಟ್ಟು ಕೆಟ್ಟ ಯೋಚನೆ ಮಾಡಿಕೊಂಡು ಮಸಾಲೆ ಸೇರಿಸಿಕೊಂಡು ಆಡಿಕೊಳ್ಳುವುದೆ ಈಗಿನ ಕಾಲದಲ್ಲಿ ರೂಢಿಯಾಗಿಬಿಟ್ಟಿದೆ. ತುಚ್ಛವಾದ, ತಾತ್ಸಾರದ, ಸಂತೋಷದ ವಿಷಯ ಕೇಳಿ ಹೊಟ್ಟೆ ಉರಿ ಪಟ್ಟುಕೊಂಡು ಬಾಳುತ್ತೇವೆ. ಇಷ್ಟೆಲ್ಲ ವಿಷಮವಿಟ್ಟುಕೊಂಡು ನಮ್ಮಲ್ಲೆ ಅಂತರದ ಗೋಡೆಯನ್ನು ನಿರ್ಮಿಸುತ್ತೇವೆ.


ಕಿವಿ ಚುಚ್ಚುವವರು ಅನೇಕರಿದ್ದರು ಉದಾಸೀನ ಮಾಡುವುದೇ ಒಳಿತು. ಮರ್ಯಾದೆ ಕೆಟ್ಟವ ಮೂರೂ ಬಿಟ್ಟವ ಎಂದು ಆಡಿಕೊಳ್ಳುವವರು ಎಡವಿಬೀಳುವುದರಲ್ಲಿ ಸಂಶಯವಿಲ್ಲ. ಮತ್ತೊಬ್ಬರ ಬದುಕನ್ನು ಅಳೆದು ನೋಡಲು ಯಾರಿಂದಲು ಸಾಧ್ಯವಿಲ್ಲ ಅವರವರ ಜೀವನ ಅವರವರಿಗೆ ಮೀಸಲು, ಅವರ ಜೀವನ ಪ್ರವೇಶಿಸಿ ಹಕ್ಕನ್ನು ಚಲಾಯಿಸಿ ಕಿಚಾಯಿಸಿ ಆಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಮನದಟ್ಟು ಮಾಡಿಕೊಳ್ಳಬೇಕು. ಅವರು ಸರಿಯಾಗಿಲ್ಲ. ಇವರು ಸರಿಯಾಗಿಲ್ಲ ಎಂಬ ವಿಕೃತ ಕಿವಿಚುಚ್ಚುವಿಕೆಯನ್ನು ಮಾಡಲು ಶತಾಯಗತಾಯ ಹೊಂಚುಹಾಕಿ ಕೆಟ್ಟ ಮನಸ್ಥಿತಿ ಹೊಂದಲು ಪ್ರಯತ್ನಪಡಬೇಡಿ. ಆರೋಗ್ಯಕರವಾದ ಮಾತು, ವಿಮರ್ಶೆ ಮತ್ತೊಬ್ಬರ ಬದುಕಿಗೆ ಒಳಿತಾಗಬೇಕೆ ವಿನಹ ಕೆಟ್ಟ ಕಿವಿಚುಚ್ಚು ಮಾತುಗಳಿಂದಲ್ಲ.

0 Comments:

Post a Comment

Subscribe to Post Comments [Atom]

<< Home