Wednesday, October 29, 2008

ನಿಷ್ಕಲ್ಮಶ ಚಿಲುಮೆ

ನನ್ನ ಅವಳ ನಡುವೆ ಪ್ರೀತಿ ಬೆಳೆದು ಸುಮಾರು ಒಂಭತ್ತು ವರುಷಗಳೇ ಆಯಿತು. ಅವಳ ಹೆಸರು ಮಧುರಿಮ, ಖಾಸಗಿ ಶಾಲೆಯೊಂದರಲ್ಲಿ ಪ್ರಾಧ್ಯಾಪಕಿ. ಸದಾ ಹಸನ್ಮುಖಿ ಶಾಂತ ಸ್ವಭಾವದವಳು. ಅವಳ ಈ ಗುಣಗಳನ್ನು ಉತ್ಕಟವಾಗಿ ಆರಾಧಿಸುತ್ತೇನೆ. ಈ ಪ್ರೀತಿಯೆ ಹಾಗೆ ಯಾರನ್ನು ಬಿಡುವುದಿಲ್ಲ ಅನ್ನಿಸುತ್ತೆ ನನಗೆ.
ಇದೇ ಒಂಭತ್ತು ವರುಷಗಳ ಹಿಂದೆ ನನ್ನ ಅವಳ ಪ್ರೀತಿ ಬೆಂಗಳೂರು - ಮುಂಬಯಿ ರೈಲಿನಲ್ಲಿ ಶುರುವಾಯಿತು. ಮುಂಜಾನೆ 5:00 ಗಂಟೆ ಹೊತ್ತಿಗೆ ಅವಳ ಕಣ್ಣಿನ ಸನ್ನೆಗಳು ನನ್ನನ್ನು ಬಹಳವಾಗಿ ಆಕರ್ಷಿಸಿದವು, ಕಣ್ಣಿನಲ್ಲೆ ಮಾತನಾಡಿಕೊಳ್ಳಲು ಶುರುಮಾಡಿಕೊಂಡೆವು. ಮೊದ ಮೊದಲು ಅವಳ ಹಾವಭಾವ ಅರ್ಥವಾಗದಿದ್ದರು ಕ್ರಮೇಣ ಎಲ್ಲವನ್ನು ಗ್ರಹಿಸಲು ಶುರುಮಾಡಿದೆ. ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ.
ಪ್ರತಿದಿನವೂ ನಾವು ಭೇಟಿಯಾಗುತ್ತಿದ್ದೆವು. ಪ್ರತಿ ಕ್ಷಣವು ಬಿಟ್ಟಿರಲಾರದ ಕ್ಷಣಗಳು, ಎಂದೂ ಬತ್ತದ ಚಿಲುಮೆಯಂತೆ ಅವಳ ಆರೈಕೆ ಹಾಗು ಪ್ರೀತಿ. ನಮಗೆ ಸಮಯ ಸಿಗುತ್ತಿದ್ದದ್ದೆ ಸಂಜೆಯಾದುದರಿಂದ ಮುಸ್ಸಂಜೆಯೇ ಭೇಟಿಯಾಗುತ್ತಿದ್ದೆವು.ಎಲ್ಲಿಯು ತನ್ನ ಕೆಲಸದ ಒತ್ತಡವನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಅವಳ ಈ ತಾಳ್ಮೆಯಿಂದಲೇ ಏನೋ ನಾನು ಮಾರುಹೋದದ್ದು. ಎಲ್ಲವನ್ನು ಹೇಳಿಕೊಳ್ಳುತ್ತಿದ್ದಳು ನಾನು ಕೂಡ ಅಷ್ಟೆ ಬಿಚ್ಚುಮನಸ್ಸಿನಿಂದ ಹೇಳಿಕೊಳ್ಳುತ್ತಿದ್ದೆ.ಹೀಗೆ ಸಾಗಿತ್ತು ನಮ್ಮ ಪ್ರೀತಿಯ ಪಯಣ ಎಲ್ಲಿಯೂ ಅಸಮಾಧಾನವಿಲ್ಲದ ಹಾಗು ನಿಷ್ಕಲ್ಮಶ ಪ್ರೀತಿಯನ್ನು ನನಗೆ ನೀಡುತ್ತಿದ್ದಳು. 
ದಿನಗಳು ಉರುಳಿದಂತೆ ನಮ್ಮಿಬ್ಬರ ಪ್ರೀತಿಯ ಬಾಳಿನಲ್ಲಿ ಮತ್ತೊಬ್ಬ ಯುವಕನ ಸೇರ್ಪಡೆಯಾಯಿತು. ನನಗೆ ತಿಳಿಯದಂತೆ ಅವನನ್ನು ಪ್ರೀತಿಸಲು ಶುರುಮಾಡಿದಳು, ಅವನ ಹೆಸರು "ಸುಶಾಂತ್". ನೋಡಲು ಸ್ಫುರದ್ರೂಪಿಯು ಹಾಗು ನಗುಮೊಗದವನಾಗಿದ್ದನು ನನಗೆ ಹೋಲಿಸಿದರೆ ನನಗಿಂತ ಜೋರಾಗಿಯೇ ಇದ್ದನು.
ನನಗು ಭೇಟಿ ಮಾಡಿಸಿದಳು. ಮನಸ್ಸಿನಲ್ಲೇ ಕುಪಿತನಾದರು ತೋರಗೊಡಲಿಲ್ಲ, ಕಳವಳಗೊಂಡೆ ನನ್ನ ಮೇಲೆ ಪ್ರೀತಿ ಕಡಿಮೆಯಾದರೆ ಏನಪ್ಪ ಗತಿ ಎಂದು ನನ್ನ ಕಣ್ಣ ಮುಂದೆಯೇ ಅವನಿಗೆ ತಿನಿಸುವುದು, ಓಡಾಡುವುದು ಕ್ರಮೇಣ ಜಾಸ್ತಿಯಾಗತೊಡಗಿತು. ನನ್ನ ವಿರೋಧ ವ್ಯಕ್ತಪಡಿಸಿದರು ಅವಳು ಶಾಂತ ಸ್ವಭಾವದಿಂದಲೆ ನನ್ನನ್ನು ಅದೇ ಆರೈಕೆಗಳಿಂದ ಪ್ರೀತಿಯ ಮಾತುಗಳಿಂದ "ನಾನು ಇಬ್ಬರನ್ನು ಸಮನಾಗಿ ಪ್ರೀತಿಸುತ್ತೇನೆ, ಸಿದ್ಧಾಂತ್" ಎನ್ನುತ್ತಿದ್ದಳು. ಮತ್ತಷ್ಟು ವಿರೋಧ ವ್ಯಕ್ತಪಡಿಸಿದರೆ ಇವಳ ಮನಸಿಗೆ ನೋವಾಗಬಹುದು ಎಂದು ಅರಿತು ಸುಮ್ಮನಾಗುತ್ತಿದ್ದೆ. ಇವೆಲ್ಲವು ಕಳೆದ ಎರಡು 
ವರುಷಗಳಿಂದ ನಡೆಯುತ್ತಿದೆ. ಒಟ್ಟಾರೆಯಾಗಿ ಸುಶಾಂತನೇ ನನ್ನ ಪ್ರೀತಿಯ ಪಾಲನ್ನು ಆಕ್ರಮಿಸಿದ, ಅವಳಾದರು ಏನು ಮಾಡಿಯಾಳು ಎಂದು ಅರಿತುಕೊಂಡೆ. "ಎಷ್ತಾದರು ನೀನು ಅವನಿಗೆ ಅಣ್ಣ, ಸಿದ್ಧಾಂತ" ಎಂದು ಅವನಿಗೆ ಊಟದ ತುತ್ತನ್ನು ಬಾಯಿಗೆ ನೀಡಿ ನನ್ನ ಶಾಲೆಯ ಚೀಲದಿಂದ ಒಂದನೇ ತರಗತಿಯ ಗಣಿತದ ಪುಸ್ತಕವನ್ನು ತೆಗೆದು ನನಗೆ ಹೇಳಿಕೊಡಲು ಅನುವುಮಾಡಿಕೊಳ್ಳುತ್ತಿದ್ದಳು.

Labels:

0 Comments:

Post a Comment

Subscribe to Post Comments [Atom]

<< Home